ವಿಜಯಸಾಕ್ಷಿ ಸುದ್ದಿ, ರೋಣ: ಶಾಸಕ ಜಿ.ಎಸ್. ಪಾಟೀಲರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ನಡೆದ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಆಗಮಿಸಿ, ರಾಜ್ಯ ಮತ್ತು ರಾಷ್ಟ್ರ ನಾಯಕರು ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದರೆ ರೋಣ ಹೊತ್ತಿ ಉರಿಯಲಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದರು.
ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಹಕ್ಕೊತ್ತಾಯ ಹಾಗೂ 10 ಸಾವಿರ ಮನವಿ ಪತ್ರಗಳ ರವಾನೆ ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಸಾವಿರಾರು ಕಾರ್ಯಕರ್ತರು, ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಶಾಸಕ ಜಿ.ಎಸ್. ಪಾಟೀಲರ ಶಕ್ತಿ ಅಡಕವಾಗಿದೆ. ಹೀಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಪಕ್ಷದ ನಾಯಕರು ವಿಳಂಬ ನೀತಿ ಅನುಸರಿಸುತ್ತ ಬಂದಿದ್ದು, ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಈಗ ನಮ್ಮ ತಾಳ್ಮೆಯ ಕಟ್ಟೆ ಒಡೆದಿದ್ದು, ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ರೋಣ ಹೊತ್ತಿ ಉರಿಯಲಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಹೊಣೆಯಾಗಲಿದೆ ಎಂದು ಎಚ್ಚರಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪಟ್ಟಣದ ಸಿದ್ದಾರೂಢ ಮಠದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಸೂಡಿ ಕ್ರಾಸ್ ತಲುಪುತ್ತಿದ್ದಂತೆ ಆಕ್ರೋಶಗೊಂಡ ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ, ಉರುಳುಸೇವೆ ಮಾಡಿದರು. ಮಾನವ ಸರಪಳಿ ನಿರ್ಮಿಸಿ ರೋಣ ಮತಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಘೋಷಣೆಗಳನ್ನು ಕೂಗಿದರು. ಕೆಲ ಕಾರ್ಯಕರ್ತರು ತಲೆ ಬೋಳಿಸಿಕೊಂಡು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿ, ಈಗ ಕೂದಲು ತೆಗೆಸಿದ್ದೇವೆ. ಸಚಿವ ಸ್ಥಾನ ತಪ್ಪಿದರೆ ನಮ್ಮ ತಲೆಯನ್ನೇ ನೀಡುತ್ತೇವೆ ಎಂದು ಬಹಿರಂಗವಾಗಿ ಸವಾಲ್ ಹಾಕಿದರು. ಒಟ್ಟಿನಲ್ಲಿ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಕಾವು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ.
ವೀರಣ್ಣ ಶೆಟ್ಟರ, ಶರಣಪ್ಪ ಬೆಟಗೇರಿ, ವಿ.ಆರ್. ಗುಡಿಸಾಗರ, ಸಿದ್ದಣ್ಣ ಬಂಡಿ, ಯೂಸುಪ್ ಇಟಗಿ, ಎಸ್.ಎಚ್. ಸೋಂಪುರ, ಮುತ್ತಣ್ಣ ಸಂಗಳದ, ವಿಶ್ವನಾಥ ಜಿಡ್ಡಿಬಾಗಿಲ, ಅಂದಪ್ಪ ಬಿಚ್ಚೂರ, ಬಾವಾಸಾಬ ಬೆಟಗೇರಿ, ಆನಂದ ಚಂಗಳಿ, ಪ್ರಕಾಶ ಹಾಲಣ್ಣವರ, ಅಪ್ಪು ಗಿರಡ್ಡಿ, ಮೌನೇಶ ಹಾದಿಮನಿ, ಸೋಮು ನಾಗರಾಜ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಮಂಜುಳಾ ರೇವಡಿ, ಇಸ್ಮಾಹಿಲ್ ಹೊರಪೇಟಿ, ಎಸ್.ಎಚ್. ಹಾದಿಮನಿ, ಮುತ್ತು ನವಲಗುಂದ, ಯಲ್ಲಪ್ಪ ಕಿರೇಸೂರ, ಅಸ್ಲಂ ಕೊಪ್ಪಳ, ಮಲೀಕ ಯಲಿಗಾರ, ಹನ್ಮಂತಪ್ಪ ತಳ್ಳಿಕೇರಿ, ಸಂಗಪ್ಪ ಜಿಡ್ಡಿಬಾಗಿಲ ಸೇರಿದಂತೆ ನೂರಾರು ಮುಖಂಡರು ಹಾಗೂ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ರೋಣ ಪಿಎಸ್ಐ ಪ್ರಕಾಶ ಬಣಕಾರ, ನರೆಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ, ಗಜೇಂದ್ರಗಡ ಪಿಎಸ್ಐ ಪ್ರಕಾಶ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಡೆಯುತ್ತಿದ್ದ ಹಕ್ಕೊತ್ತಾಯ ಪ್ರತಿಭಟನೆಯ ವೇಳೆ ಪಟ್ಟಣದ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡികളെ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಕೆಲ ಗಂಟೆಗಳ ಕಾಲ ವಾಹನಗಳ ಸಂಚಾರ ಕೂಡ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನಾ ರ್ಯಾಲಿ ಕಾಂಗ್ರೆಸ್ ಪಕ್ಷದ ಕಾರ್ಯಲಯಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಜಿ.ಎಸ್. ಪಾಟೀಲ ಅಭಿಮಾನಿಯೋರ್ವ ಹರಿತವಾದ ಆಯುಧದಿಂದ ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಮುಂದಾದ ಘಟನೆಯೂ ನಡೆಯಿತು. ಆಗ ಸ್ಥಳದಲ್ಲಿದ್ದ ಕಾರ್ಯಕರ್ತರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರು. ಈ ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.



