ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ತಾಲೂಕು ವ್ಯಾಪ್ತಿಯ ಹೊರಗುತ್ತಿಗೆ ನೌಕರರು ಬಾಕಿ ಇರುವ ಆರು ತಿಂಗಳ ವೇತನ ಪಾವತಿಗೆ ಒತ್ತಾಯಿಸಿ ಉದ್ಯೋಗ ಖಾತ್ರಿ ಯೋಜನೆಯ ಎಲ್ಲ ಕಾರ್ಯಗಳನ್ನು ಸ್ಥಗಿತಗೊಳಿಸಿ ಸೋಮವಾರ ಕಚೇರಿ ಎದರು ಅಸಹಕಾರ ಚಳುವಳಿ ಆರಂಭಿಸಿದರು.
ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟ ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘ ಇವುಗಳ ನಿರ್ದೇಶನದಂತೆ ಸಂಘದ ತಾಲೂಕು ಘಟಕದ ಸದಸ್ಯರು ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧ ಹುದ್ದೆಗಳಲ್ಲಿ 25ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿಯು 6 ತಿಂಗಳಿಂದ ಹಾಗೂ ಬಿಎಫ್‌ಟಿಯವರದು 4 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಸದಸ್ಯರು ವಿನಂತಿಸಿದರು.
ಸಂಘದ ತಾಲೂಕು ಪ್ರತಿನಿಧಿಗಳಾದ ವೀರೇಶ ಬಸನಗೌಡ್ರ, ಚಂದ್ರಶೇಖರ ಹಳ್ಳಿ, ನವೀನ ಬಸರಿ, ಪ್ರದೀಪ ನರೇಗಲ್ಲ, ಮಂಜುನಾಥ ಕುಲಕರ್ಣಿ, ಅಜಯ ಅಬ್ಬಿಗೇರಿ, ದಿನೇಶ ಮಲ್ಲನಗೌಡ್ರ, ಪ್ರವೀಣ ದೂಳಣ್ಣನವರ, ಅರುಣ ಕಪ್ಪರದ, ಅಲ್ತಾಫ್ ಅಮ್ಮಿನಬಾವಿ, ಪ್ರಶಾಂತ ಯಾವಗಲ್ಲಮಠ, ಸಿದ್ದಪ್ಪ ಸೋಮನಕಟ್ಟಿ, ದಾವಲಸಾಬ್ ಚಲ್ಲಮರದ, ಬಸವರಾಜ ಪಟ್ಟಣದ, ಮಂಜುನಾಥ ಬಂಡಿವಾಡ, ಮೈಲಾರಪ್ಪ ಸೋಮನಕಟ್ಟಿ ಇತರರು ಇದ್ದರು.