ಬಡ್ಡಿ ದಂಧೆಕೋರರಿಗೆ ಕಠಿಣ ಶಿಕ್ಷೆ ವಿಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಡ್ಡಿ ದಂಧೆಕೋರರ ಹಾವಳಿಯಿಂದ ಗದಗ-ಬೆಟಗೇರಿ ಅವಳಿ ನಗರದ ಜನತೆ ತತ್ತರಿಸಿ ಹೋಗಿದ್ದು, ಅಮಾನುಷವಾಗಿ ಜನರಿಂದ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಇಂತಹ ಬಡ್ಡಿ ದಂಧೆಕೋರರು ಹಾಗೂ ಮೈಕ್ರೋ ಫೈನಾನ್ಸ ಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಹೀಗೆ ಕಿರುಕುಳ ನೀಡುವವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೊಂದ ಮಹಿಳೆಯರು ಅಂಬಿಕಾ ಎಲ್.ಕಬಾಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ದೂರು ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಅಂಬಿಕಾ ಕಬಾಡಿ ಮಾತನಾಡಿ, ಗದಗ-ಬೆಟಗೇರಿ ನಗರದಲ್ಲಿ ಈ ಹಿಂದೆ ಪೊಲೀಸ್ ಇಲಾಖೆಯಿಂದ 12ಕ್ಕೂ ಹೆಚ್ಚು ಬಡ್ಡಿ ದಂಧೆಕೋರರ ಮನೆಗಳ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಹಣ, ಆಸ್ತಿ-ಪಾಸ್ತಿಗಳು ಹಾಗೂ ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದರೂ ಈವರೆಗೂ ಬಡ್ಡಿ ದಂಧೆಕೊರರು ತಮ್ಮ ಬಡ್ಡಿ ವ್ಯವಹಾರವನ್ನು ನಿಲ್ಲಿಸಿಲ್ಲ. ಬಡಜನರ ರಕ್ತ ಹೀರುವ ಇಂತಹ ರಕ್ತ ಪಿಪಾಸುಗಳ ಅಕ್ರಮಕ್ಕೆ ಕಡಿವಾಣ ಬೀಳದೆ ಇರುವುದು ನಮ್ಮ ಜಿಲ್ಲೆಯ ದುರ್ದೈವ. ಇವರ ವಿರುದ್ಧ ಪೊಲೀಸರಿಗೆ ತಿಳಿಸುತ್ತೇನೆಂದರೆ, ಅವರ ಮೇಲೆ ದಬ್ಬಾಳಿಕೆ ನಡೆಸಿ, ಜೀವ ಬೆದರಿಕೆ ಹಾಕುತ್ತಿದ್ದಾರೆ.

ಹೀಗೆ ನೊಂದ ಕುಟುಂಬಗಳು ಇಂದು ಬೀದಿಗಿಳಿದು ಹೋರಾಟ ನಡೆಸುತ್ತಿದ್ದೇವೆ. ಹಣವನ್ನು ಮರಳಿ ಕೊಟ್ಟ ನಂತರ ನಿಮ್ಮ ಆಸ್ತಿಯನ್ನು ಮರಳಿಸುತ್ತೇವೆಂದು ಸಬೂಬು ಹೇಳಿ, ಹಣ ಮರಳಿಸಿದರೂ ಆಸ್ತಿಯನ್ನು ಬಿಟ್ಟುಕೊಡದೆ ಲಪಟಾಯಿಸುತಿದ್ದಾರೆ. ಇದರಿಂದ ಸಾಕಷ್ಟು ಜನ ನೊಂದಿದ್ದಾರಲ್ಲದೆ, ಕೆಲವರು ಊರು ಬಿಟ್ಟಿದ್ದಾರೆ. ಇನ್ನು ಕೆಲವು ಜನ ತಮ್ಮ ಮರ್ಯಾದೆಗೆ ಅಂಜಿ ಜೀವವನ್ನೇ ಬಿಡುತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೊರಾಟಗಾರದ ದಾವಲಸಾಬ ಮುಳಗುಂದ, ಅನೀಫ್ ಮುಳಗುಂದ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ, ಮಮತಾಜಬಾಯಿ, ಅನಿತಾ, ಜ್ಯೋತಿ, ತುಳಸಿ ಕಬಾಡಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೊಂದ ಕುಟುಂಬಗಳ ಸದಸ್ಯರು ಇದ್ದರು.

ಬ್ಲ್ಯಾಕ್‌ ಮೇಲ್‌ ಮೂಲಕ ಜನರ ಜೀವ ಹಿಂಡುತ್ತಿರುವ ಇವರುಗಳನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಕ್ರಮ ಕೈಗೊಂಡು ಅಮಾಯಕರ ಆಸ್ತಿ-ಪಾಸ್ತಿಗಳನ್ನು ಮರಳಿ ಕೊಡಿಸುವಂತೆ ಕ್ರಮ ವಹಿಸಬೇಕು. ಮುಂದಿನ ಏಳು ದಿನಗಳೊಳಗಾಗಿ ಈ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸದಿದ್ದಲ್ಲಿ ಇವರಿಂದ ನೊಂದ ಕುಟುಂಬಗಳಿಂದ ಗದಗ ಜಿಲ್ಲೆಯಾದ್ಯಾಂತ ಸಾವಿರಾರು ಸಂಖ್ಯೆಯಲ್ಲಿ ಕುಟುಂಬಸ್ಥರು, ಆ ಕುಟುಂಬಗಳ ಮಹಿಳೆಯರು ಮತ್ತು ವಿವಿಧ ಸಂಘನೆಗಳಿಂದ ಗದಗ ಜಿಲ್ಲೆ ಬಂದ್‌ಗೆ ಮುಂದಾಗುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here