ಪಿಎಸ್‌ಐ ವಿರುದ್ಧ ಕ್ರಮವೇಕಿಲ್ಲ?

0
Protest demanding suspension of PSI
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅಮಾನತ್ತಿಗೆ ಆಗ್ರಹಿಸಿ ಕಳೆದ 9 ದಿನಗಳಿಂದ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಸಂಘಟನೆಯವರು ನಡೆಸುತ್ತಿರುವ ಹೋರಾಟದಲ್ಲಿ ಗುರುವಾರ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

Advertisement

ಅ.12ರಂದು ದಸರಾ ಹಬ್ಬದ ದುರ್ಗಾದೇವಿ ಮೆರವಣಿಗೆ ದಿನ ಮುಸ್ಲಿಂ ಯುವಕರು ಗೋಸಾವಿ ಸಮಾಜದ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆಂದು ಮರುದಿನ ಗೋಸಾವಿ ಸಮಾಜದವರು ಠಾಣೆಗೆ ದೂರು ಕೊಡಲು ಹೋದಾಗ ಅವರ ಮೇಲೆಯೇ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಹಾರ ಮಾಡಿದ್ದಾರೆಂದು ಆರೋಪಿಸಿ ಅ.19ರಂದು ಲಕ್ಷ್ಮೇಶ್ವರ ಬಂದ್ ಕರೆ ನೀಡಿ ಪಿಎಸ್‌ಐ ಅಮಾನತ್ತಿಗೆ ಆಗ್ರಹಿಸಲಾಗಿತ್ತು. ಇಷ್ಟಾಗಿಯೂ ಪಿಎಸ್‌ಐ ಮೇಲೆ ಯಾವುದೇ ಕ್ರಮವಾಗದ್ದರಿಂದ ಕಳೆದ 9 ದಿನಗಳಿಂದ ತಹಸೀಲ್ದಾರ ಕಚೇರಿಯ ಹೊರಗಡೆ ಅನಿರ್ದಿಷ್ಠಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಸತ್ಯಾಗ್ರಹ ನಿರತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಗಂಗಾಧರ ಕುಲಕರ್ಣಿ, ನ್ಯಾಯ ಕೇಳಲು ಹೋದ ಗೋಸಾವಿ ಸಮಾಜದ ಯುವಕರು, ಮಹಿಳೆಯರ ಮೇಲೆ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಯೋಗಿಸಿದ್ದಾರೆ. ಅವರನ್ನು ಅಮಾನತ್ತು ಮಾಡಬೇಕೆಂದು ಅ.೧೯ರಂದು ಶ್ರೀರಾಮಸೇನೆ ನೀಡಿದ ಲಕ್ಷ್ಮೇಶ್ವರ ಬಂದ್ ಕರೆಯನ್ನು ವಿಫಲ ಮಾಡಲು 163 ಕಲಂ ಜಾರಿಗೊಳಿಸಿದ್ದರೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಪಿಎಸ್‌ಐ ಅವರ ಬಗ್ಗೆ ಗೂಂಡಾವರ್ತನೆ, ಹದ್ದು ಮೀರಿದ ನಡತೆ ಎಲ್ಲವೂ ಗೊತ್ತಿದ್ದರೂ ಪೊಲೀಸ್ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳಲು ಮೀನಾಮೇಷ ಮಾಡುತ್ತಿರಲು ಕಾರಣವೇನು? ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆಯ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತಿದೆ. ದತ್ತಮಾಲೆ ಅಭಿಯಾನದ ಬಳಿಕ ಅಂದರೆ ನ.11ರ ನಂತರ ಹೋರಾಟ ತೀವೃ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸೋಮು ಗುಡಿ, ಜಿಲ್ಲಾ ಶಾರೀರಿಕ ಪ್ರಮುಖ ಮಹೇಶ ರೋಖಡೆ, ಬಸವರಾಜ ಕುರ್ತಕೋಟಿ, ಸತೀಶ ಕುಂಬಾರ, ತಾಲೂಕಾಧ್ಯಕ್ಷ ಈರಣ್ಣ ಪೂಜಾರ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಬಾಳಪ್ಪ ಗೋಸಾವಿ, ಹರೀಶ ಗೋಸಾವಿ ಸೇರಿದಂತೆ ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.

ಪಿಎಸ್‌ಐ ಈರಪ್ಪ ರಿತ್ತಿ ಅವರ ಕಾನೂನು ಮೀರಿದ ವರ್ತನೆ, ಮಹಿಳೆಯರು, ವೃದ್ಧರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ಹಲವು ದಿನಗಳಿಂದ ಬಡವರು, ಅಮಾಯಕರು, ಶ್ರೀರಾಮಸೇನೆ ಸಂಘಟನೆಯವರು ನಡೆಸುತ್ತಿರುವ ಹೋರಾಟದ ಬಗ್ಗೆ ಕಿಂಚಿತ್ತೂ ಗಮನ ಹರಿಸದ ಜಿಲ್ಲಾ ಉಸ್ತುವಾರಿ ಸಚಿವರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಡೆ ನಾಚಿಕೆಗೇಡಿನ ಸಂಗತಿ. ಪಿಎಸ್‌ಐ ಮೇಲೆ ಎಸ್‌ಪಿಯವರು ನ.10ರೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ 11ನೇ ತಾರೀಖಿನ ನಂತರ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷರಾದ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ರಾಜ್ಯದ ಶ್ರೀರಾಮಸೇನೆ ಕಾರ್ಯಕರ್ತರು ಹೋರಾಟದ ಸ್ಥಳಕ್ಕೆ ಆಗಮಿಸಲಿದ್ದಾರೆ. ಹೋರಾಟದ ತೀವೃತೆಗೆ ಪೊಲೀಸ್ ಇಲಾಖೆ ಕಾರಣವಾಗಬೇಕಾಗುತ್ತದೆ.
– ಗಂಗಾಧರ ಕುಲಕರ್ಣಿ.
ಶ್ರೀರಾಮಸೇನಾ ರಾಜ್ಯಾಧ್ಯಕ್ಷ.

 


Spread the love

LEAVE A REPLY

Please enter your comment!
Please enter your name here