ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಲ್ಲಿನ ನಗರಸಭೆ ಆವರಣದಲ್ಲಿ ಕೊ.ಜಿ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ ಅನಿರ್ದಿಷ್ಟ ಧರಣಿ 35ನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ರೈತ ಸಂಘದ ವಿ.ಆರ್. ನಾರಾಯಣರೆಡ್ಡಿ ಬಣದ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ಸಂಘದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸರಕಾರ ಕೊಪ್ಪಳ ಭಾಗ್ಯನಗರದ ಮೇಲೆ ಪರಿಸರ ಹಾನಿಯ ಕಾರ್ಮೋಡ ಕವಿದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉತ್ತರ ಕರ್ನಾಟಕ ಸಮಸ್ಯೆಗಳ ಹೆಸರಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶ ಒಳ್ಳೆಯದಿದ್ದರೂ ಗಂಭೀರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚರ್ಚಿಸುವಂತೆ ಮಾಡಲು ಬಲವಾದ ಚಳವಳಿಯ ಒತ್ತಡ ಬೇಕಾಗುತ್ತದೆ. ನಾವು ಈ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ಮಾಡೋಣ ಎಂದು ಹೇಳಿದರು.
ಶುಕ್ರವಾರ 36ನೇ ದಿನದ ಹೋರಾಟದಲ್ಲಿ ಬಾಧಿತ ಹಳ್ಳಿಗಳ ರೈತರು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ ಇವರ ನೇತೃತ್ವದಲ್ಲಿ ಕೇಂದ್ರೀಯ ಬಸ್ ನಿಲ್ದಾಣದ ಮುಂದಿನ ಸಂತಶ್ರೇಷ್ಠ ಕನಕದಾಸ ವೃತ್ತದಿಂದ ಆರಂಭವಾಗಿ ಅಶೋಕ ವೃತ್ತದವರೆಗೆ ಸರಕಾರದ ವಿರುದ್ಧ ಘೋಷಣೆ ಕೂगುತ್ತಾ ಮೆರವಣಿಗೆ ಮೂಲಕ ಬಂದು ಅಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ನಗರಕ್ಕೆ ಹೊಂದಿಕೊಡ ಬಲ್ಡೋಟಾ ವಿಸ್ತರಣೆ ಮಾಡಬಾರದೆಂದು ಆಗ್ರಹಿಸಲಿದ್ದಾರೆ ಎಂದು ಹೇಳಿದರು.
ಧರಣಿಯಲ್ಲಿ ನಿವೃತ್ತ ಉಪನ್ಯಾಸಕರು ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಎಫ್.ಎಸ್. ಜಾಲಿಹಾಳ, ಮಹಾದೇವಪ್ಪ ಮಾವಿನಮಡು, ಮಲ್ಲಿಕಾರ್ಜುನ ಗೋನಾಳ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಖಬೂಲ ರಾಯಚೂರು, ಮಂಜುನಾಥ ಹಲಗೇರಿ, ಭೀಮಪ್ಪ ಯಲಬುರ್ಗಾ, ಬಸವರಾಜ ಶೀಲವಂತರ, ಕೇಶವ ಕಟ್ಟಿಮನಿ ಇದ್ದರು.


