ಗದಗ:- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ಕಲಾಪದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಆಡಿರುವ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಇಂದು ಗದಗ ಬಂದ್ ಗೆ ಕರೆ ಕೊಡಲಾಗಿದೆ.
ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಬಂದ್ ಗೆ ಕರೆ ಕೊಡಲಾಗಿದ್ದು, ಬೆಳ್ಳಂ ಬೆಳಗ್ಗೆಯೇ ಪ್ರತಿಭಟನೆ ಕಾವು ಜೋರಾಗಿದೆ. ಇನ್ನೂ ಪ್ರತಿಭಟನೆ ವೇಳೆಯಲ್ಲಿಯೇ ಅವಘಡ ಸಂಭವಿಸಿದೆ.
ಗದಗ ನಗರದ ಮುಳಗುಂದ ನಾಕಾ ಸರ್ಕಲ್ ನಲ್ಲಿ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೊರಟಿದ್ದ ಸ್ಕೂಲ್ ವ್ಯಾನ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವಿದ್ಯಾರ್ಥಿನಿ ಕಾಲಿಗೆ ಪೆಟ್ಟಾಗಿದೆ. ಪ್ರತಿಭಟನೆ ಹಿನ್ನೆಲೆ ಸರ್ಕಲ್ ನ ಕಿರಿದಾದ ರಸ್ತೆಯಲ್ಲಿ ವಾಹನಗಳು ಹೊರಟಿದ್ದವು. ಈ ವೇಳೆ ಬೈಕ್, ಸ್ಕೂಲ್ ವ್ಯಾನ್ ಬೈಕ್ ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಶಾಲೆಗೆ ತಮ್ಮ ಪಾಲಕರ ಜೊತೆ ಬೈಕ್ ಮೇಲೆ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಸ್ಕೂಲ್ ವ್ಯಾನ್ ತಾಗಿದ್ದು, ಪರಿಣಾಮ ಬಾಲಕಿ ಕಾಲಿಗೆ ಪೆಟ್ಟಾಗಿದೆ. ಕೂಡಲೇ ಪ್ರತಿಭಟನಾನಿರತರು ವಿದ್ಯಾರ್ಥಿನಿಗೆ ಹಾರೈಕೆ ಮಾಡಿದ್ದಾರೆ. ವಿದ್ಯಾರ್ಥಿಯನ್ನ ಸಮಾಧಾನ ಮಾಡಿ ಕಳುಹಿಸಿದ್ದಾರೆ. ಇನ್ನೂ ಈ ಘಟನೆಗೆ ಜಿಲ್ಲಾಡಳಿತವೇ ನೇರ ಕಾರಣ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಾಗೂ ಬಂದ್ ಬಗ್ಗೆ ಈಗಾಗಲೇ ಅವರ ಗಮನಕ್ಕೆ ತಂದರೂ ರಜೆ ಘೋಷಿಸಿಲ್ಲ. ಕಲಬುರಗಿ ಮಾದರಿಯಲ್ಲಿ ಸ್ಕೂಲ್ ಗೆ ರಜೆ ನೀಡಬೇಕಿತ್ತು. ಈ ಅವಘಡಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೆ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದರು.
ಘಟನೆಯಿಂದ ಎಚ್ಚೆತ್ತು ಹಾಗೂ ಹೋರಾಟಗಾರರ ಒತ್ತಾಯಕ್ಕೆ ಮಣಿದು, ಗದಗ ಬೆಟಗೇರಿ ಅವಳಿ ನಗರ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಗದಗ ಡಿಡಿಪಿಐ ಆರ್ ಎಸ್ ಬುರಡಿ ಆದೇಶ ಹೊರಡಿಸಿದ್ದಾರೆ.
ಅವಳಿ ನಗರದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಡಿಪಿಐ ಆರ್ ಎಸ್ ಬುರಡಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.