ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಕೊಲೆಗೈದು ಸುಟ್ಟು ಹಾಕಲಾಗಿದೆ. ನಿನ್ನೆ ಸಂಜೆ ವಿದ್ಯಾರ್ಥಿನಿಯ ಶವ ನಗರದ ಹೊರವಲಯದಲ್ಲಿ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಶವದ ಗುರುತು ಕೂಡ ಪತ್ತೆಯಾಗಿರಲಿಲ್ಲ. ಬಳಿಕ ಕೊಲೆಯಾದ ವಿದ್ಯಾರ್ಥಿನಿಯನ್ನು ವರ್ಷಿತಾ ಎಂದು ಗುರುತಿಸಲಾಗಿದೆ. ಇದೀಗ ವರ್ಷಿತಾ ಹತ್ಯೆ ಪ್ರಕರಣವನ್ನು ಖಂಡಿಸಿ, ಚಿತ್ರದುರ್ಗದಲ್ಲಿ ದಲಿತಪರ ಸಂಘಟನೆಗಳು ಮತ್ತು ವರ್ಷಿತಾಳ ಸಂಬಂಧಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯು ತೀವ್ರಗೊಂಡ ಹಿನ್ನೆಲೆಯಲ್ಲಿ ನಗರದ ಡಾ. ಅಂಬೇಡ್ಕರ್ ವೃತ್ತ ಮತ್ತು ಜಿಲ್ಲಾಸ್ಪತ್ರೆ ಎದುರು ರಸ್ತೆ ತಡೆದು ಧರಣಿ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ನಗರದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡಿದರು. ಚಳ್ಳಕೆರೆ ಗೇಟ್‌ನಿಂದ ಅಂಬೇಡ್ಕರ್ ವೃತ್ತದವರೆಗಿನ ಮಾರ್ಗವನ್ನು ಪೊಲೀಸರು ಬದಲಾಯಿಸಿ, ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ಪಿ. ದಿನಕರ್ ಮತ್ತು ನಗರ ಠಾಣೆ ಸಿಪಿಐ ಉಮೇಶ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.