ಗದಗ: ಗದಗ ನಗರದಲ್ಲಿ ಪಂಚಮಸಾಲಿ ಸಮಾಜ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಸಕ ಯತ್ನಾಳ್ʼರನ್ನು ಉಚ್ಛಾಟನೆ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ನಗರದ ಹಳೇ ಡಿಸಿ ಕಚೇರಿ ಸರ್ಕಲ್ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದೇ ವೇಳೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ಕೃತ್ಯವನ್ನು ತಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದ್ದು, ಹೈಕಮಾಂಡ್‌ನ ಈ ನಿರ್ಧಾರಕ್ಕೆ ಕರ್ನಾಟಕ ಬಿಜೆಪಿಯ ಕೆಲ ನಾಯಕರು ಬೇಸರಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್ ಪರ ಭರ್ಜರಿ ಚರ್ಚೆಗಳು ನಡೆದಿವೆ. ಮತ್ತೊಂದೆಡೆ ಯತ್ನಾಳ್ ಬೆನ್ನಿಗೆ ಪಂಚಮಸಾಲಿ ಸಮಯದಾಯ ಮುಖಂಡರು ನಿಂತಿದ್ದಾರೆ.