ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಗಜೇಂದ್ರಗಡದಲ್ಲಿ ನಡೆದ ಅಹಿಂದ ಒಕ್ಕೂಟದ ಪ್ರತಿಭಟನಾ ಸಭೆಯಲ್ಲಿ ಶಾಸಕ ಜಿ.ಎಸ್. ಪಾಟೀಲ ಅವರು ಆಡಿದ ಮಾತುಗಳನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಈಶ್ವರ ಸಮರ್ಥಿಸಿಕೊಂಡು ಪತ್ರಿಕಾ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದು ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ನಾಗರಾಜ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಟೀಕೆಗೂ ಮತ್ತು ರಚನಾತ್ಮಕ ಸಲಹೆಗಳಿಗೂ ಅವಕಾಶವಿದೆ. ಆದರೆ ಪ್ರಚೋದನಕಾರಿ ಹೇಳಿಕೆಗೆ ಅವಕಾಶವಿಲ್ಲ. ಪ್ರಧಾನ ಮಂತ್ರಿಗಳು ಪ್ರಜಾಪ್ರಭುತ್ವದ ಮಾದರಿಯಲ್ಲಿ ಸರ್ಕಾರವನ್ನು ಸಂವಿಧಾನಬದ್ಧವಾಗಿ ರಚನೆ ಮಾಡಿದ್ದಾರೆ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ, ಅವರ ಹಿನ್ನೆಲೆ ಏನೇ ಇದ್ದರೂ ಸಾರ್ವಜನಿಕವಾಗಿ ಹೇಳಿಕೆ ಕೊಡುವಾಗ ವಿಮರ್ಶಿಸಿ ಜಾಗೃತೆ ವಹಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆಯವರ ಸರ್ಕಾರದಲ್ಲಿ ಇದ್ದವರು. ಆರೋಪ ಬಂದಾಗ ಹೆಗಡೆಯವರು ನಡೆದುಕೊಂಡ ರೀತಿಯನ್ನು ಅನುಸರಿಸಿ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.