ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನ ಮಂತ್ರಿ ಆವಾಸ್ ಯೋಜನೆಚಿಯಲ್ಲಿ, 2022ರ ಸಾಲಿನಲ್ಲಿ ಗದಗ-ಬೆಟಗೇರಿ ನಗರದ ಅರ್ಹ ಸ್ಲಂ ಪ್ರದೇಶದ ಜನರಿಗೆ ಮನೆಗಳನ್ನು ಮಂಜೂರು ಮಾಡದೇ, ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸದೇ ನಗರದ ಸ್ಲಂ ನಿವಾಸಿಗಳನ್ನು ವಂಚಿಸುತ್ತಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಗದಗ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕ್ರಮವನ್ನು ಖಂಡಿಸಿ ಅ.7ರಂದು ಸ್ಲಂ ಬೋರ್ಡ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ತಿಳಿಸಿದರು.
ಅವರು ನಗರಸಭೆ ಉದ್ಯಾನವನದಲ್ಲಿ ಸ್ಲಂ ಸಮಿತಿ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಸ್ಲಂ ಬೋರ್ಡ್ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಯು ರಾಜ್ಯ ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ, ಸ್ಲಂ ಪ್ರದೇಶದ ಬಡ ಜನರನ್ನು ಹಕ್ಕುಪತ್ರ ಮತ್ತು ವಸತಿ ಯೋಜನೆಯಲ್ಲಿ ವಂಚಿಸಿ ಕೊಟ್ಯಾಂತರ ಹಣವನ್ನು ಲೂಟಿ ಮಾಡಿದ್ದಾರೆ. ಇದನ್ನು ಖಂಡಿಸಿ ನಮ್ಮ ಸಂಘಟನೆಯಿಂದ ಅನೇಕ ಬಾರಿ ಉನ್ನತ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ದುರ್ಗಪ್ಪ ಮಣ್ಣವಡ್ಡರ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಮೆಹರುನಿಸಾ ಢಾಲಾಯತ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ಮಂಜುನಾಥ ಶ್ರೀಗಿರಿ, ಬಾಷಾಸಾಬ ಡಂಬಳ, ಮಲೇಶಪ್ಪ ಕಲಾಲ, ಚಂದ್ರಪ್ಪ ಲಕ್ಕುಂಡಿ, ಶರಣಪ್ಪ ಬಿಂಗದಕಟ್ಟಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿದರು.