ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕರಿಗೆ ಒಳ್ಳೆಯ ರೀತಿಲ್ಲಿ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ಇಲಾಖೆಯ ಸೇವೆಗಳನ್ನು ನೀಡಿ ಸಮುದಾಯದಲ್ಲಿ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ನೌಕರರ ಸಂಘದಿಂದ ಆರೋಗ್ಯ ಇಲಾಖೆಯ ನೌಕರರ ಮತ್ತು ಅಧಿಕಾರಿಗಳ ಕುಂದು-ಕೊರತೆ ನಿವಾರಣೆಗೆ ಸಮನ್ವಯತೆಯಿಂದ ಸ್ಪಂದಿಸಿ ಸಮಸ್ಯೆಗಳನ್ನ ಪರಿಹರಿಕೊಳ್ಳುವಲ್ಲಿ ಎಲ್ಲ ಸಂಘಟಕರು ಪ್ರಯತ್ನಶೀಲರಾಗಬೇಕೆಂದು ಡಾ.ವೆಂಕಟೇಶ ರಾಠೋಡ ಹೇಳಿದರು.
ಅವರು ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಗದಗ ಜಿಲ್ಲಾ ಘಟಕ ಮತ್ತು ಜಿಲ್ಲಾ ಸಮೀಕ್ಷಾ ಘಟಕದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಘಟಕಕ್ಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದಪ್ಪ ಎನ್.ಲಿಂಗದಾಳ ಹಾಗೂ ನಿರ್ದೇಶಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ನೌಕರರ ಸಂಘಟನೆಯ ಪಧಾಧಿಕಾರಿಗಳು ನೌಕರರ ಬೇಡಿಕೆಗಳ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿ ಹೋರಾಟಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಲಿಂಗದಾಳರು ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರ ನೌಕರರ ಸಂಘವನ್ನು ಕಟ್ಟುವಲ್ಲಿ ಪರಿಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಸಿದ್ದಪ್ಪ ಲಿಂಗದಾಳ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆರೋಗ್ಯ ನಿರೀಕ್ಷಣಾದಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಸಿ. ಹಿರೇಹಾಳ ಮಾತನಾಡಿ, ನೌಕರರು ಸಂಘಟನೆಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಬೇಕು. ನಿಮ್ಮೆಲ್ಲರ ಪ್ರತಿನಿಧಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ನಿಮ್ಮ ನೋವು-ನಲಿವುಗಳಿಗೆ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಅಜಯಕುಮಾರ ಕಲಾಲ, ಕೆ.ಎ. ಬೂದಿಹಾಳ ಮಾತನಾಡಿದರು. ವಾಚಿiÀiï.ಎನ್. ಕಡೆಮನಿ, ಸರೋಜ ಎಸ್.ಕಟ್ಟಿಮನಿ, ಏಕನಾಥಗೌಡ ಪಾಟೀಲ, ಡಾ. ರವಿ ಕಡಗಾವಿ, ಗೋಪಾಲ ಸೂರಪೂರ, ಕೆ.ವಿ. ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.
ಮಂಜುನಾಥ ಸಜ್ಜನ ಪ್ರಾರ್ಥಿಸಿದರು. ಬಸವರಾಜ ಸೋಮಗೊಂಡ ಸ್ವಾಗತಿಸಿದರು. ಏಕನಾಥಗೌಡ ಪಾಟೀಲ ನಿರೂಪಿಸಿದರು.