ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸರಕಾರದಿಂದ ಮಂಜೂರಾದ ಬರ ಪರಿಹಾರ, ಬೆಳೆ ವಿಮಾ ಇನ್ನಿತರೆ ಸಬ್ಸಿಡಿ ಹಣವನ್ನು ರೈತರಿಗೆ ಸರಿಯಾಗಿ ಮುಟ್ಟಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಸರಕಾರದಿಂದ ರೈತರಿಗೆ ಬೆಳೆ ಹಾನಿ, ಪರಿಹಾರವಾಗಿ ಬಂದ ಹಣವನ್ನು ಬ್ಯಾಂಕ್ ಅಧಿಕಾರಿಗಳು ರೈತರ ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿರುವದು ತಿಳಿದು ಬಂದಿದೆ. ಇದನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ರೈತರಿಗೆ ಸರಕಾರದಿಂದ ಬಂದ ಬರ ಪರಿಹಾರ, ಅನ್ನಭಾಗ್ಯ, ಗೃಹಲಕ್ಷ್ಮಿ, ಪಿ.ಎಮ್. ಕಿಸಾನ್, ನರೇಗಾ ಯೋಜನೆ, ವೃದ್ಧಾಪ್ಯ ವೇತನ ಇತ್ಯಾದಿ ಹಣವನ್ನು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೊಪಿಸಿದರು.
ಸರಕಾರ ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ, ಬರಗಾಲದಿಂದ ನೊಂದಿರುವ ರೈತರಿಗೆ ಬರುವ ಸಹಾಯಧನದ ಹಣವನ್ನು ಸಾಲದ ಖಾತೆಗೆ ಹಾಕಿಕೊಳ್ಳಬಾರದು. ಸಾಲ ಮರುಪಾವತಿಗಾಗಿ ಬ್ಯಾಂಕ್ ಅಧಿಕಾರಿಗಳು ನೊಟೀಸ್ ನೀಡುವದು, ಸಾಲ ತುಂಬಲು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಟಾಕಪ್ಪ ಸಾತಪೂತೆ, ನಾಗರಾಜ ಪಾಟೀಲ್, ಭದ್ರಪ್ಪ ಈಳಗೇರ, ರಮೇಶ ಹುಲಕೋಟಿ, ಅಜಯ ಕರೀಗೌಡ್ರ, ಷಣ್ಮುಖ ಹೆಸರೂರ, ಬಾಪುಗೌಡ ಪಾಟೀಲ, ಮುತ್ತಪ್ಪ ಕಡಣ್ಣನವರ, ನೀಲಕಂಠಪ್ಪ ಕನೋಜ, ಗಂಗಾಧರ ಕೊಡಳ್ಳಿ,ಶಿವಪ್ಪ ಗಡಬಿಡಿ, ಕರಿಯಪ್ಪ ಹುರಕನವರ, ರಾಜು ನೆರ್ತಿ ಸೇರಿದಂತೆ ಅನೇಕ ರೈತರು ಹಾಜರಿದ್ದರು.