ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ರಾಜ್ಯ ಶ್ರೀ ಡಾ|| ಪಂಡಿತ್ ಪುಟ್ಟರಾಜ್ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಪಿ. ಮುಳುಗುಂದ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಬಡವರು ಹಳ್ಳಿಗಳಿಂದ ಚಿಕಿತ್ಸೆಗಾಗಿ ಬರುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ಒಂದು ರೂಪಾಯಿ ನಾಣ್ಯದಿಂದ ಶುದ್ಧ ನೀರು ಪಡೆಯಲು ಅನಾನುಕೋಲಗಳಿದ್ದು, ಎಲ್ಲರಲ್ಲಿ ನಾಣ್ಯಗಳು ಲಭ್ಯವಿರದು. ಅನಿವಾರ್ಯವಾದಲ್ಲಿ 20 ರೂಪಾಯಿ ನೀಡಿ ಒಂದು ಬಾಟಲ್ ನೀರು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರಣ, ಶೀಘ್ರವಾಗಿ ಜಿಲ್ಲಾ ಆಸ್ಪತ್ರೆಯ ಕನಿಷ್ಠ ನಾಲ್ಕು ಭಾಗಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ದಾವಲಸಾಬ್ ನಾಗನೂರ, ಹಿರಿಯರಾದ ಹಾಜಿಅಲಿ ಕೊಪ್ಪಳ, ಜಂದಿಸಾಬ ಕಾಗದಗಾರ, ಚಾಂದಸಾಬ ಬೋದ್ಲೆಖಾನ, ಶಬ್ಬೀರ್ ಪೀರಜಾದೆ, ಎಂ.ಪಿ. ಶಲವಡಿ ಮುಂತಾದವರಿದ್ದರು.