ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025 ಕುರಿತಂತೆ ಸಮೀಕ್ಷೆದಾರರಿಂದ ಮನೆ ಮನೆ ಭೇಟಿ ದಿನಾಂಕವನ್ನು ಮೇ 25ರವರೆಗೆ ವಿಸ್ತರಿಸಲಾಗಿದ್ದು, ಸಮೀಕ್ಷೆದಾರರಿಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾದಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025 ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮನೆ ಮನೆಯ ಭೇಟಿಯ ಸಂದರ್ಭದಲ್ಲಿ ತಮ್ಮ ಮಾಹಿತಿಯನ್ನು ಒದಗಿಸದೇ ಇದ್ದಲ್ಲಿ ಮೇ 26, 27, 28ರಂದು ವಿಶೇಷ ಶಿಬಿರಗಳಲ್ಲಿ ಮಾಹಿತಿ ನೀಡಲು ಅವಕಾಶವಿದೆ. ನಿಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ತಮ್ಮ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ನೊಂದಿಗೆ ಮಾಹಿತಿ ನೀಡಬೇಕು. ಸರ್ಕಾರದ ಸೌಲಭ್ಯಗಳು ಪರಿಶಿಷ್ಟ ಜಾತಿಯ ಒಳಪಂಗಡಗಳಿಗೆ ಸಮಾನವಾಗಿ ತಲುಪಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಇದೊಂದು ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ ಎಂದರು.
ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025 ಕುರಿತಂತೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ವೆಬ್‌ಸೈಟ್ ವಿಳಾಸದಲ್ಲಿ ಮೇ 19ರಿಂದ 28ರವರೆಗೆ ಮರು ನಿಗದಿಪಡಿಸಲಾಗಿದೆ. ಈ ಕುರಿತು ನಗರಸಭೆ ಹಾಗೂ ಕಸ ವಿಲೇವಾರಿ ವಾಹನದ ಧ್ವನಿವರ್ಧಕದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಮತ್ತು ಪೊಲೀಸ್ ಠಾಣೆಗಳಲ್ಲಿ ಈ ಕುರಿತು ಪ್ರಚಾರ ಕೈಗೊಳ್ಳಲು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025 ಕುರಿತ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಗಣತಿದಾರರಿಗೆ ಸರಿಯಾಗಿ ಮಾಹಿತಿ ಇಂಧೀಕರಿಸುವ ಕುರಿತು ಇರುವ ಗೊಂದಲಗಳ ಬಗ್ಗೆ ಹಾಗೂ ಸಮೀಕ್ಷೆಗೆ ಒಳಪಡುವ ಕುಟುಂಬಗಳು ನೀಡುವ ಮಾಹಿತಿಯನ್ನು ಸರಿಯಾಗಿ ನಮೂದಿಸುವ ಕುರಿತು, ಬೇಡ ಜಂಗಮ ಪ್ರಮಾಣಪತ್ರ ಪಡೆಯದವರು ಸಮೀಕ್ಷಾ ಸಂದರ್ಭದಲ್ಲಿ ಜಾತಿ ನಮೂದಿಸುವ ಕುರಿತು ಇರುವ ಗೊಂದಲಗಳ ಬಗ್ಗೆ ಸಮಾಜದ ಮುಖಂಡರು ಸಭೆಯ ಗಮನಕ್ಕೆ ತಂದರು. ಒಟ್ಟಾರೆ ಸಮೀಕ್ಷೆ ಸರಿಯಾಗಿ ಆಗಬೇಕು ಎಂಬ ಒಕ್ಕೊರಲ ಬೇಡಿಕೆ ಸಮಾಜದ ಮುಖಂಡರಿಂದ ವ್ಯಕ್ತವಾಯಿತು. ಮಾದಿಗ, ಮಾದಾರ, ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಜಾತಿಗಳನ್ನು ನಮೂದಿಸುವ ಕುರಿತಂತೆಯೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಡಿವೈಎಸ್‌ಪಿ ಮಹಾಂತೇಶ ಸಜ್ಜನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದವರು ಪಾಲ್ಗೊಂಡಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಮನೆ ಮನೆಯ ಭೇಟಿ ಸಂದರ್ಭದಲ್ಲಿ ತಮ್ಮ ಮಾಹಿತಿಯನ್ನು ನೀಡದವರು ನೇರವಾಗಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ವಿವರಕ್ಕೆ ಸಹಾಯವಾಣಿ ಸಂಖ್ಯೆ 9481359000 ಸಂಪರ್ಕಿಸಬಹುದಾಗಿದೆ ಎಂದು ಸಭೆಗೆ ತಿಳಿಸಿದರು.