ಬಡ ರೈತರಿಗೆ ನ್ಯಾಯ ಒದಗಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.19ರಂದು ಶಿರಹಟ್ಟಿಯ ಫಕ್ಕೀರೇಶ್ವರ ಮಠದಿಂದ ಗದಗ ಜಿಲ್ಲಾಡಳಿತ ಭವನದವರೆಗೆ ಪಾದಯಾತ್ರೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಉತ್ತರ ಕರ್ನಾಟಕ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡು 9 ವರ್ಷಗಳು ಕಳೆದರೂ ರೈತರಿಗೆ ಪರಿಹಾರ ನೀಡಿಲ್ಲ. ಕೂಡಲೇ ಅವರಿಗೆ ಪರಿಹಾರ ನೀಡದಬೇಕು. ಇಲ್ಲವಾದರೆ, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ನೂರಾರು ವರ್ಷಗಳಿಂದ ತಮ್ಮ ಉಪಜೀವನಕ್ಕಾಗಿ ಜಮೀನು ಸಾಗುವಳಿ ಮಾಡುತ್ತ ಬಂದಿದ್ದಾರೆ. ಬಗರ್‌ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಅವಲಂಬಿತರಿಗೆ ಹಕ್ಕುಪತ್ರ ನೀಡದೇ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ತಾಲೂಕಿಗೆ ಒಂದು ನ್ಯಾಯ, ಇತರೆ ತಾಲೂಕಿನ ಜನರಿಗೆ ಒಂದು ನ್ಯಾಯವಾಗಿದೆ. ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲರು ಹುಲಕೋಟಿ ಅಥವಾ ಗದಗ ತಾಲೂಕಿಗೆ ಮಾತ್ರ ಸೀಮಿತವಲ್ಲ. ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇದ್ದಾರೆ ಎನ್ನುವ ವಾಸ್ತವ ಅಂಶವನ್ನು ಅರ್ಥ ಮಾಡಿಕೊಂಡು ಅವರಿಗೆ ನ್ಯಾಯ ಒದಗಿಸಬೇಕು ಎಂದರು.

ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಭೂಸ್ವಾಧೀನ ಮಾಡಿಕೊಳ್ಳುವಾಗ ದೊಡ್ಡವರ ಜಮೀನು ಪಡೆಯದೇ, ಸಣ್ಣ ಪುಟ್ಟ ರೈತರಿಗೆ ಆಸೆ ತೋರಿಸಿ ಜಮೀನು ಪಡೆದುಕೊಂಡಿದ್ದಾರೆ. ಈ ಮೂಲಕ ದೊಡ್ಡವರ ಜಮೀನುಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಅಲ್ಲದೇ ಖಾಸಗಿ ಭೂಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರೊಂದಿಗೆ ಶಾಮೀಲಾಗಿ 11 ಕೋಟಿ ಪರಿಹಾರ ಕೊಡಿಸಿ ಸರಕಾರಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಸೋಲಾರ್ ಹಾಗೂ ಪವನ ವಿದ್ಯುತ್ ಕಂಪನಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಪ್ರಶ್ನಿಸಲು ರೈತರಿಗೆ ಧ್ವನಿ ಇಲ್ಲದಂತಾಗಿದೆ. ಆಡಳಿತ ವ್ಯವಸ್ಥೆಯೂ ಇದರಿಂದ ದೂರ ಉಳಿದಿದೆ. ಪವನ ವಿದ್ಯುತ್ ಕಂಪನಿಗಳಿಂದ ಮೋಸಕ್ಕೆ ಒಳಗಾಗಿರುವ ರೈತರಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಶಲವಡಿ, ಕೃಷ್ಣ ದೇಶಪಾಂಡೆ, ನಿಂಗಪ್ಪ ಪೂಜಾರಿ, ಫಿರೋಜ್ ನದಾಫ್, ನಬೀಸಾಬ್, ಮಹದೇವಪ್ಪ ಬೇವಿನಮರದ, ಪೀರ್‌ಸಾಬ್ ನದಾಫ್, ಮುಲ್ಲಾ ಸಾಬ್, ಮಲ್ಲಿಕ್‌ಸಾಬ್ ಇದ್ದರು.

ತಾಲೂಕಿನ ನರಸಾಪುರದಲ್ಲಿ ಕೆಐಎಡಿಬಿ 2ನೇ ಹಂತದ 216 ಎಕರೆ ಭೂಸ್ವಾಧೀನ ಕೈಬಿಟ್ಟು ರೈತರಿಗೆ ಜಮೀನು ಮರಳಿಸಬೇಕು. ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಗ್ರಾಮದ ಹುಲ್ಲುಗಾವಲು ಸಾಗುವಳಿ ರೈತರಿಗೆ ಹಕ್ಕುಪತ್ರ ನೀಡಬೇಕು. ಶಾಸಕರ ನೇತೃತ್ವದ ಬಗರ್‌ಹುಕುಂ ಸಮಿತಿ ಇದ್ದೂ ಇಲ್ಲದಂತಾಗಿದೆ. ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಅರ್ಹ ರೈತರಿಗೆ ಜಮೀನು ಮಂಜೂರು ಮಾಡಬೇಕು ಎಂದು ರವಿಕಾಂತ ಅಂಗಡಿ ಒತ್ತಾಯಿಸಿದರು.


Spread the love

LEAVE A REPLY

Please enter your comment!
Please enter your name here