ಬೆಂಗಳೂರು: ವಿಶಿಷ್ಟ ವರ್ಗವಾದ ಅಲೆಮಾರಿ ಜನಾಂಗದವರನ್ನು ಬಲಾಢ್ಯರ ಜೊತೆ ಸೇರಿಸಿದ್ದು, ಸಾಮಾಜಿಕ ಅನ್ಯಾಯ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಶ್ಲೇಷಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮಾಜದ ಪ್ರತಿಭಟನೆಯಲ್ಲಿ ಇಂದು ಭಾಗವಹಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಸೌಲಭ್ಯ, ವಿದ್ಯೆ, ಸಂಪತ್ತು, ನೌಕರಿಯಿಂದ ವಂಚಿತವಾದ ಜನಾಂಗಕ್ಕೆ ಅವಕಾಶ ಕೊಡುವುದೇ ಒಳ ಮೀಸಲಾತಿಯ ಉದ್ದೇಶ ಎಂದು ವಿವರಿಸಿದರು. ಸರಕಾರ ಅವೆಲ್ಲವನ್ನೂ ಪರಿಗಣಿಸಿಲ್ಲ. ನ್ಯಾ.ಸದಾಶಿವ, ನ್ಯಾ. ನಾಗಮೋಹನ್‍ದಾಸ್, ಮಾಜಿ ಸಚಿವ ಮಾಧುಸ್ವಾಮಿ ವರದಿಗಳನ್ನೂ ಸರಕಾರ ಪರಿಗಣಿಸಿಲ್ಲ ಎಂದು ಟೀಕಿಸಿದರು.
ಲಂಬಾಣಿ, ಬೋವಿ, ಕೊರಚ, ಕೊರಮ ಸಮುದಾಯಕ್ಕೆ ನಾವು ಶೇ 4.5 ಕೊಟ್ಟಿದ್ದೆವು. ಅದನ್ನು ಕಡಿತಗೊಳಿಸಿದ್ದಾರೆ. ಈ ಅಲೆಮಾರಿ ಜನಾಂಗದವರಿಗೆ ಶೇ 1 ಕೊಡಲಾಗಿತ್ತು. ಅವರನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ; ನಾವು ಯಾರಿಗೂ ಮೋಸ ಮಾಡದೆ ನ್ಯಾಯಯುತವಾಗಿ ಕೊಟ್ಟಿದ್ದಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.
ಇವರು ಮಾರ್ಜಾಲ ನ್ಯಾಯ ಮಾಡಿದ್ದಾರೆ. ಖಾಜಿ ನ್ಯಾಯ ಮಾಡಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾದ ಕ್ರಮ ತೆಗೆದುಕೊಂಡಿದ್ದಾರೆ. ಇದನ್ನು ಸರಿಪಡಿಸಿ ಎಂದು ಆಗ್ರಹಿಸಿದರು. ಧ್ವನಿ ಇಲ್ಲದ ಅಲೆಮಾರಿ ಜನಾಂಗದವರಿಗೆ ಧ್ವನಿ ಕೊಡಿ; ಇಲ್ಲದಿದ್ದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.