ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ದೊಡ್ಡೂರ ರಸ್ತೆಯಲ್ಲಿನ ಅಲೆಮಾರಿ-ಗುಡಿಸಲು ನಿವಾಸಿಗಳಿಗೆ ಆಶ್ರಯ, ಅಗತ್ಯ ದಾಖಲೆ, ಸೌಲಭ್ಯ ಕಲ್ಪಿಸುವಂತೆ ಸೋಮವಾರ ತಾಲ್ಲೂಕಾ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ, ಲಕ್ಷ್ಮೇಶ್ವರ ಸೇರಿ ಶಿರಹಟ್ಟಿ ಮತಕ್ಷೇತ್ರದಾದ್ಯಂತ ಇರುವ ಅಲೆಮಾರಿ ಜನಾಂಗದವರಿಗೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಅಲೆಮಾರಿ ಪಟ್ಟ ಕಳಚಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುಟುಂಬಗಳಿಗೆ ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣಪತ್ರ, ಜನ್ಮದಿನಾಂಕ, ರೇಶನ್ ಕಾರ್ಡ್ ಸೇರಿ ಕಾನೂನಾತ್ಮಕವಾಗಿ ಅಗತ್ಯ ದಾಖಲೆ, ಸೌಲಭ್ಯ ಕಲ್ಪಿಸಬೇಕು. ದಾಖಲೆಗಳು ಇಲ್ಲದ್ದರಿಂದ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅದಕ್ಕಾಗಿ ಕಚೇರಿಗಳಿಗೆ ಅಲೆದು ನೊಂದಿದ್ದಾರೆ.
ಅಲೆಮಾರಿಗಳೂ ನಮ್ಮೆಲ್ಲರಂತೆ ಮನುಷ್ಯರೇ. ಅವರಿಗೂ ಎಲ್ಲರಂತೆ ಬದುಕುವ ಭದ್ರತೆ, ಹಕ್ಕು, ಸೌಲಭ್ಯ ಕಲ್ಪಿಸಿಕೊಡಬೇಕು. ಕಳೆದ ಅನೇಕ ವರ್ಷಗಳಿಂದ ಪಟ್ಟಣ ಸೇರಿ ಅನೇಕ ಕಡೆ ಸಣ್ಣ ಪುಟ್ಟ ವ್ಯಾಪಾರ-ಉದ್ಯೋಗ ಮಾಡಿಕೊಂಡು ರಸ್ತೆ ಬದಿಯ ಜೋಪಡಿಯಲ್ಲಿಯೇ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪೂರಕ ದಾಖಲೆ ಹೊಂದಿದ ಎಲ್ಲರಿಗೂ ಆಶ್ರಯ ಯೋಜನೆಯಡಿ ನಿವೇಶನ, ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ತಹಸೀಲ್ದಾರ ರಾಘವೇಂದ್ರ ಕುಲಕರ್ಣಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ರಾಮಣ್ಣ ದೊಡ್ಡಮನಿ, ಜೆ.ಎ. ಮನಿಯಾರ, ಅಲೆಮಾರಿ ನಿವಾಸಿಗಳಾದ ಅಣ್ಣಪ್ಪ ಶಿರಹಟ್ಟಿ, ಕಲ್ಲಪ್ಪ ರಾಣೇಬೆನ್ನೂರ ಸೇರಿ ಹಲವರಿದ್ದರು.



