ವಿಜಯಸಾಕ್ಷಿ ಸುದ್ದಿ, ರೋಣ: ದೇಶದಲ್ಲಿ ಮುಸ್ಲಿಮರು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಹಿಂದಿದ್ದಾರೆ. ಹೀಗಾಗಿ ಮುಸ್ಲಿಮರು ಹೊತ್ತಿನ ಊಟ ಬಿಟ್ಟರೂ ಚಿಂತೆಯಿಲ್ಲ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬೀಳಬಾರದು ಎಂದು ಮಾಜಿ ಶಾಸಕ ಹಾಗೂ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ಸೈಯದ್ ಅಜಂಪೀರ ಖಾದ್ರೀ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪಬ್ಲಿಕ್ ಶಾಲೆಯ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಕ್ಕಳು ಅಕ್ಷರ ಜ್ಞಾನದಿಂದ ವಂಚಿತರಾಗದಂತೆ ಸಮುದಾಯದ ಪಾಲಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಉನ್ನತಿ ಮತ್ತು ಸಮಾಜದ ಪ್ರಗತಿ ಶಿಕ್ಷಣದಿಂದ ಮಾತ್ರ ಎನ್ನುವುದನ್ನು ನಾವೆಲ್ಲರೂ ಅರಿಯಬೇಕಿದೆ. ಸಮಾಜದ ಬಂಧುಗಳು ಬಡತನದಿಂದ ಹೊರಬರಲು ಶಿಕ್ಷಣ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಸಮಾಜ ಯೋಚಿಸಬೇಕಿದೆ. ಇಂದಿನ ಮಕ್ಕಳು ನಾಳೆಯ ಉತ್ತಮ ಪ್ರಜೆಗಳಾಗಲಿದ್ದಾರೆ ಎಂದರು.
ಸಮಾಜದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಕರ ಹಾಗೂ ಪಾಲಕರ ಆದ್ಯ ಕರ್ತವ್ಯ. ಮಕ್ಕಳಿಗೆ ಒಳ್ಳೆಯ ಹಾಗೂ ಕೆಟ್ಟ ಸಂಗತಿಗಳ ಬಗ್ಗೆ ತಿಳಿಸುವುದು ಕೂಡ ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ. ನಾವು ಬಡತನದಲ್ಲಿ ಹುಟ್ಟಿರಬಹುದು. ಆದರೆ ನಮ್ಮ ಮಕ್ಕಳು ನಮ್ಮಂತೆ ಬಡವರಾಗಿ ಉಳಿಯಬಾರದು ಎಂಬ ಚಿಂತನೆ ಪಾಲಕರಲ್ಲಿ ಬರಬೇಕು. ಮುಸ್ಲಿಮರಲ್ಲಿ ದಾನ ಮಾಡುವುದು ಕಡ್ಡಾಯ. ಹಾಗೆಯೇ, ಮಕ್ಕಳಿಗೆ ಅಕ್ಷರದ ದಾನ ಮಾಡುವುದು ಕೂಡ ಕಡ್ಡಾಯ. ಅಂದಾಗ ಮಾತ್ರ ಓರ್ವ ಮುಸ್ಲಿಮನಿಗೆ ಸ್ವರ್ಗ ಸಿಗಲು ಸಾಧ್ಯ ಎಂಬ ಸತ್ಯವನ್ನು ನಾವು ತಿಳಿದುಕೊಳ್ಳಬೇಕು. ಸಮಾಜ ಮತ್ತಷ್ಟು ಪ್ರಗತಿಯತ್ತ ಸಾಗಲು ಅಕ್ಷರ ಜ್ಞಾನ ಬೇಕು. ಅಂದಾಗ ಸಮಾಜದ ಮಕ್ಕಳು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಸಾಚಾರ್ ವರದಿ ಪ್ರಕಾರ ಮುಸ್ಲಿಂ ಬಂಧುಗಳು ಶಿಕ್ಷಣದಿಂದ ತೀರಾ ಹಿಂದುಳಿದಿರುವುದು ಕಂಡು ಬರುತ್ತದೆ. ಹೀಗಾಗಿ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕಳೆದ ವರ್ಷ 52 ವಿದ್ಯಾರ್ಥಿಗಳಿಂದ ಆರಂಭಗೊಂಡ ಶಾಲೆ 2ನೇ ವರ್ಷಕ್ಕೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆಯೆಂದರೆ ಪಬ್ಲಿಕ್ ಶಾಲೆಯ ಗುಣಮಟ್ಟದ ಶಿಕ್ಷಣ ಕಾರಣ. ಮುಖ್ಯವಾಗಿ ಇಂದಿನ ವಿಜ್ಞಾನ ವಸ್ತುಪ್ರದರ್ಶನ ಬೆಳದು ನಿಂತ ಶಾಲೆಗಳಿಗೆ ಸವಾಲ್ ಹಾಕುವಂತಿತ್ತು. ಅಷ್ಟರ ಮಟ್ಟಿಗೆ ನಮಗೆ ಖುಷಿ ತಂದಿದೆ ಎಂದ ಅವರು, ಶಾಲೆಯ ಬೆಳವಣಿಗೆಯಲ್ಲಿ ನಮ್ಮ ಮನೆತನ ಸದಾ ಇರಲಿದೆ ಎಂದರು.
ಬಾವಾಸಾಬ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ಯೂಸುಫ್ ಇಟಗಿ, ಖಲೀಲ ರಾಮದುರ್ಗ, ಪೈಜಹ್ಮದ ಕಲಾದಗಿ, ಅಬ್ದುಲ್‌ಲತೀಫ್ ಖತೀಬ, ದಸ್ತಗೀರ ಗಡವಾಲೆ, ಇಮಾಮಸಾಬ ದರಗಾದ, ಬಾಷಾಸಾಬ ಚಿನ್ನೂರ, ಮಲೀಕ ಯಲಿಗಾರ, ಅಸ್ಲಾಂ ಕೊಪ್ಪಳ, ರಿಯಾಜ ಮುಲ್ಲಾ ಸೇರಿದಂತೆ ಅಂಜುಮನ್ ಕಮಿಟಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶಾಸಕ ಜಿ.ಎಸ್. ಪಾಟೀಲ ರಾಜ್ಯ ಕಂಡ ಅಪ್ರತಿಮ ನಾಯಕ. ಅವರ ಸೇವೆ ಸ್ಮರಣೀಯ. ಪಟ್ಟಣ ಸೇರಿದಂತೆ ಮತಕ್ಷೇತ್ರದ ಮುಸ್ಲಿಂ ಮಕ್ಕಳು ಇಂದು ವಿದ್ಯಾವಂತರಾಗಲು ಅವರು ಕೊಟ್ಟ ಕೊಡುಗೆ ಕಾರಣ ಎಂದು ಸಮಾಜದ ಹಿರಿಯರು ನನಗೆ ತಿಳಿಸಿದ್ದು ನನಗೆ ಬಹಳ ಸಂತಸ ತಂದಿದೆ.
ಸೈಯದ್ ಅಜಂಪೀರ ಖಾದ್ರೀ.
ಅಧ್ಯಕ್ಷರು, ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮ.



