ವಿಜಯಸಾಕ್ಷಿ ಸುದ್ದಿ, ರೋಣ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದು, ಅವರು ಯಶಸ್ಸು ಪಡೆಯಲು ಗುಣಮಟ್ಟದ ಶಿಕ್ಷಣ ನೀಡುವ ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಕರೆ ನೀಡಿದರು.
ಅವರು ನಿಡಗುಂದಿಯ ಡಾ. ವೀರಪ್ಪ ಸಂಕನೂರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆ ಹಾಗೂ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಸರ್ವತೋಮುಖ ಬೆಳೆವಣಿಗೆ ಹೊಂದಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕ ಸುಭಾಸ ಸಂಕನೂರ ವಹಿಸಿದ್ದರು. ನಿಡಗುಂದಿಕೊಪ್ಪದ ಶ್ರೀ ಮ.ನಿ.ಪ್ರ ಅಭಿನವ ಚನ್ನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕಾಲೇಜಿನ ಪ್ರಾಚಾರ್ಯ ಎಸ್.ಆರ್. ಕರಮುಡಿ ಸೇರಿದಂತೆ ಸಿಬ್ಬಂದಿಗಳು ಹಾಗೂ ಮುಖಂಡರು ಕಾಲೇಜಿನಲ್ಲಿ ವಿಜ್ಞಾನ ವಿಷಯ ಪ್ರಾರಂಭಿಸಲು ಮತ್ತು ನಿಡಗುಂದಿಯಲ್ಲಿ ಬಿ.ಸಿ.ಎಮ್ ಹಾಸ್ಟೆಲ್ ತೆರೆಯಲು ಶಾಸಕರಿಗೆ ಮನವಿ ಸಲ್ಲಿಸಿದರು.
2025ರ ದ್ವಿತೀಯ ಪಿಯುಸಿ ಪರಿಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಾವೇರಿ ರಾಮಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಶಾಹಿನಾ ನದಾಫ್, ತೃತೀಯ ಸ್ಥಾನ ಪಡೆದ ಇಮಾಂಬಿ ಮುಮ್ಮನವರ ಇವರುಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಗೀತಾ ಕುಕನೂರ, ಜಗದೀಶ್ ಕರಡಿ, ವಿ.ಆರ್. ಗುಡಿಸಾಗರ ವಕೀಲರು, ಡಾ. ಸಂಗಪ್ಪ ಸಂಕನೂರ, ಅಂದಪ್ಪ ಬಿಳ್ಳೂರ, ಶಶಿಧರ ಹೊಟ್ಟಿನ್, ಶಿವಪ್ಪ ಸೂಡಿ, ಧರ್ಮಪ್ಪ ಕೊಪ್ಪದ್ ಮತ್ತು ಪಂಚಪ್ಪ ಕರಡಿ ವೇದಿಕೆಯಲ್ಲಿದ್ದರು. ಎನ್.ಟಿ. ಮಾಳೋದೆ ಸ್ವಾಗತಿಸಿದರು. ಆರ್.ಎಚ್. ಶಿಂಧೆ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಇಟಗಿ ವಂದಿಸಿದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಅವರ ಸಹೋದರರು ತಂದೆ ವೀರಪ್ಪ ಸಂಕನೂರ ಹಾಗೂ ತಾಯಿ ಶಾಂತಮ್ಮ ಸಂಕನೂರ ಇವರ ಸ್ಮರಣಾರ್ಥ ಪ್ರತಿ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರತಿ ವರ್ಷ ನಗದು ಬಹುಮಾನ ನೀಡಲು ಗ್ರಾಮೀಣ ಬ್ಯಾಂಕ್‌ನಲ್ಲಿ ರೂ. 1 ಲಕ್ಷ ಠೇವಣಿ ಮಾಡಿರುವುದನ್ನು ಶಾಸಕ ಜಿ.ಎಸ್. ಪಾಟೀಲ ಶ್ಲಾಘಿಸಿ ಅಭಿನಂದಿಸಿದರು.



