ಬೆಂಗಳೂರು: ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹಾಜರಾದ ವ್ಯಕ್ತಿಯ ಮೇಲೆ ಪಿಎಸ್ಐ ಹಲ್ಲೆ ನಡೆಸಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಗಡಿ ರೋಡ್ ಠಾಣೆಯ ಪಿಎಸ್ಐ ಕೌಶಿಕ್ ವಿರುದ್ಧವೇ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿರೀಕ್ಷಣಾ ಜಾಮೀನು ಪ್ರತಿಯನ್ನು ಹಿಡಿದು ಠಾಣೆಗೆ ಬಂದಿದ್ದ ಅವಿನಾಶ್ ಎಂಬ ವ್ಯಕ್ತಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಅವಿನಾಶ್ ಅವರು ಕೋರ್ಟ್ ಮೂಲಕ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ಪಿಎಸ್ಐ ಕೌಶಿಕ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಿವಿಲ್ ಕೇಸಿನಲ್ಲಿ ಜಾಮೀನು ಪಡೆದು ಠಾಣೆಗೆ ಬಂದಿದ್ದಾಗ “ಬೇಲ್ ಜೊತೆ ಬಂದಿದಿಯಾ?” ಎಂದು ನಿಂದಿಸಿ, ಕೆನ್ನೆಗೆ ಹೊಡೆದು ಕಿವಿಗೆ ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಎಂಎಲ್ಸಿ ವರದಿಯಲ್ಲೂ ಗಾಯದ ವಿವರ ದಾಖಲಾಗಿದೆ ಎನ್ನಲಾಗಿದೆ.
ಇದಲ್ಲದೆ, “ಈ ಕೇಸಿನಲ್ಲಿ ಬೇಲ್ ಪಡೆದುಕೊಂಡರೆ ನಿನ್ನ ಮೇಲೆ ಮತ್ತೊಂದು ಕೇಸ್ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಲಾಗಿದೆ ಎಂಬುದೂ ದೂರಿನಲ್ಲಿ ಹೇಳಲಾಗಿದೆ.
ಈ ಪ್ರಕರಣಕ್ಕೂ ಮೊದಲು ಅವಿನಾಶ್ ಅವರ ತಾಯಿ ಪ್ರಮೀಳಾ ವಿರುದ್ಧ ಚೀಟಿ ಹಣ ವಂಚನೆ ಸಂಬಂಧ ಲಕ್ಷ್ಮೀ ಎಂಬುವವರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ನೋಟಿಸ್ ನೀಡದೇ ಅವಿನಾಶ್ ಅವರ ತಾಯಿ, ಸಹೋದರಿ ಹಾಗೂ ತಂದೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಾಮೀನು ಪಡೆದ ನಂತರವೂ ಅವಿನಾಶ್ ಅವರನ್ನು ಅವರ ತಾಯಿ ಮತ್ತು ಸಹೋದರಿಯ ಎದುರಲ್ಲೇ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಅವಿನಾಶ್ ಅವರು ಪಿಎಸ್ಐ ಕೌಶಿಕ್, ಲಕ್ಷ್ಮೀ ಹಾಗೂ ನರಸಿಂಹ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



