ಬೆಂಗಳೂರು:- ಶೀಘ್ರವೇ ಪಿಎಸ್‌ಐ ಫಲಿತಾಂಶ ಪ್ರಕಟಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಸಂಬಂಧ ‘X’ ಮಾಡಿರುವ ಅವರು, ಇತ್ತೀಚೆಗಷ್ಟೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಉಚ್ಛ ನ್ಯಾಯಾಲಯದ ಆದೇಶದಂತೆ 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ನಡೆಸಿ 2024ರ ಮಾರ್ಚ್ 28 ರಂದು ಅಂತಿಮ ಪಟ್ಟಿ ಪ್ರಕಟಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲು ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ನೀಡಿ ಇದುವರೆಗೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೇ ಇರುವುದು ಸರ್ಕಾರದ ಬೇಜವಾಬ್ದಾರಿತನವೋ ಅಥವಾ ಯೋಜಿತ ಧೋರಣೆಯೋ ಎಂಬ ಅನುಮಾನ ಪರೀಕ್ಷಾರ್ಥಿಗಳಲ್ಲಿ ಕಾಡುತ್ತಿದೆ.
ಈಗಾಗಲೇ ಅನೇಕ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದ್ದು, ಕಳೆದ 4 ವರ್ಷಗಳಿಂದಲೂ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅಂತಿಮ ಆಯ್ಕೆ ಪಟ್ಟಿ ಎದುರು ನೋಡುತ್ತಿರುವುದು ಈ ಸರ್ಕಾರದ ಅರಿವಿಗೆ ಬಾರದಿರುವುದು ದುರ್ದೈವವೇ ಸರಿ.
ಪದೇ ಪದೇ ಪರೀಕ್ಷೆ ಎದುರಿಸುವ ಉದ್ಯೋಗಾಕಾಂಕ್ಷಿಗಳನ್ನು ಗೊಂದಲಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರ ಈ ಕೂಡಲೇ 545 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯುವ ಕಾಳಜಿ ತೋರಲಿ ಎಂದು ಹೇಳಿದ್ದಾರೆ.