ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಿಸ್ವಾರ್ಥ ಸೇವೆಯ ಮೂಲಕ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕೀರ್ತಿ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಸಲ್ಲುತ್ತದೆ. ಸಮಾಜದಲ್ಲಿ ಅನೇಕ ಬಡ, ಅಂಧ, ಅನಾಥರಿಗೆ ಆಶ್ರಯದಾತ ಎಂದೇ ಹೆಸರುವಾಸಿಯಾಗಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಸಮಾಜದಲ್ಲಿ ಅಂಧರಿಗೂ ಒಂದು ಸುಂದರವಾದ ಲೋಕ ಇದೆ ಎಂಬ ಸಂದೇಶವನ್ನು ಸಾರಿದ್ದಾರೆ ಎಂದು ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಸಿದ್ಧಾರೂಢ ನಗರದಲ್ಲಿ ಶುಕ್ರವಾರ ಪದ್ಮಭೂಷಣ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕವಿ ಪಂಡಿತ ಪುಟ್ಟರಾಜ ಗವಾಯಿಗಳು ತಮ್ಮ ಜೀವಿತಾವಧಿಯಲ್ಲಿ ಸಂಗೀತ ಲೋಕವನ್ನು ಸೃಷ್ಟಿಸಿದ ಮಹಾನ್ ಪವಾಡ ಪುರುಷರು. ಇಂತಹ ಪೂಜ್ಯರ ದೇವಸ್ಥಾನವನ್ನು ಗ್ರಾಮದ ಸಕಲ ಭಕ್ತರು ಸೇರಿಕೊಂಡು ನಿರ್ಮಿಸುತ್ತಿರುವುದು ಆಧ್ಯಾತ್ಮಿಕ ಪ್ರೇರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದುಕಿನ ಒತ್ತಡದಲ್ಲಿ ಆಧ್ಯಾತ್ಮಿಕತೆ ಕಡಿಮೆಗೊಳ್ಳುತ್ತಿರುವುದರಿಂದ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ದೇವಸ್ಥಾನಗಳು ಮಾನಸಿಕ ಮತ್ತು ಬೌದ್ಧಿಕ ವಿಚಾರಗಳಿಗೆ ಶಾಂತಿ ಮತ್ತು ನೆಮ್ಮದಿ ಕಲ್ಪಿಸುವ ಕೇಂದ್ರಗಳಾಗಿವೆ ಎಂದರು.
ಡಾ. ಆರ್.ಬಿ. ಬಸವರಡ್ಡೇರ ಮಾತನಾಡಿ, ಸಿದ್ಧಾರೂಢ ನಗರದ ಎಲ್ಲಾ ಭಕ್ತರು ಸೇರಿಕೊಂಡು ಯಾವುದೇ ಜಾತಿ-ಧರ್ಮವನ್ನು ಮಾಡದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಪಂಡಿತ ಪುಟ್ಟರಾಜ ಗವಾಯಿಗಳ ದೇವಸ್ಥಾನ ನಿರ್ಮಿಸಲು ತೀರ್ಮಾನ ಮಾಡಿರುವುದು ಒಳ್ಳೆಯ ಸಂಕೇತವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಐ.ಎಸ್. ಪಾಟೀಲ, ಯುವ ಮುಖಂಡ ಅಕ್ಷಯ ಪಾಟೀಲ, ಎಂ.ಎಸ್. ಚಿನ್ನೂರು ಮಾತನಾಡಿದರು. ಯಲ್ಲಾಲಿಂಗೇಶ್ವರ ಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷೆ ಲಲಿತಾ ರಾಠೋಡ, ಪಾಲಾಕ್ಷಯ್ಯ ಅರಳಲಿಮಠ, ಬಸವರಾಜ ಮಲ್ಲಾಪೂರ, ಅಂದಪ್ಪ ವೀರಾಪೂರ, ಬಸವರಾಜ ವೀರಾಪೂರ, ಎಚ್.ಡಿ. ದ್ವಾಸಲ, ಬಸವರಾಜ ತಳವಾರ, ಮಂಜುನಾಥ ಅಂಗಡಿ, ಸುರೇಶ ನಾಯ್ಕರ್, ಸಿದ್ದು ಹರದಾರಿ, ಸಚಿನ ಪಾಟೀಲ, ಅಂದಪ್ಪ ಹಲಕುರ್ಕಿ, ಭೀಮಶಿ ಮಲ್ಲಾಪೂರ, ಶರಣಪ್ಪ ಹುಳ್ಳಿ, ಜಗದೀಶ ಅವರಡ್ಡಿ, ಸೇರಿದಂತೆ ಗ್ರಾ.ಪಂ ಸದ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಕ್ಷರಿ ಗವಾಯಿಗಳ ಮಠದ ಪೀಠಾಧಿಪತಿ ಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ಅಬ್ಬಿಗೇರಿ ಗ್ರಾಮದಲ್ಲಿ ಆಧ್ಯಾತ್ಮಿಕತೆ, ಪರಂಪರೆಯ ಪದ್ಧತಿಗಳು ಇನ್ನೂ ಜೀವಂತವಾಗಿವೆ. ಶ್ರೀಗಳ ದೇವಸ್ಥಾನವನ್ನು ನಿರ್ಮಿಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.