ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕರ್ನಾಟಕ ರಾಜ್ಯ ಶ್ರೀ ಪಂ. ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ. ಮುಳಗುಂದ ನೇತೃತ್ವದಲ್ಲಿ ಲಿಂಗೈಕ್ಯ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಹಾಗೂ ಗದಗ ನವೀಕರಣಗೊಂಡ ರೈಲು ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣ ಮಾಡಬೇಕೆಂದು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಪಿ. ಮುಳಗುಂದ ಮಾತನಾಡಿ, ಗದುಗಿನ ನಡೆದಾಡುವ ದೇವರೆಂದೇ ಪ್ರಸಿದ್ಧಿಯಾಗಿರುವ, ಸಂಗೀತ, ಸಾಹಿತ್ಯ, ನಾಟಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗೈದ ಲಿಂಗೈಕ್ಯ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಗದಗ ಹೊಸ ರೈಲು ನಿಲ್ದಾಣಕ್ಕೆ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ನಾಮಕರಣ ಮಾಡುವ ಕುರಿತು ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆದರೆ ಈ ವಿಷಯವಾಗಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ರಮೇಶ ಬೇಕ್ರಿ, ಅಶ್ಫಕಲಿ ಹೊಸಳ್ಳಿ, ಅಲ್ಲಾವುದ್ದೀನ್ ಮುಳಗುಂದ, ಗವಿದ್ದಯ್ಯ ಹಳ್ಳಿಕೇರಿ, ಶಂಭು ಅಂಗಡಿ, ಉಮೇಶ್ ರಾಂಪೂರು, ಭಗತ ಬಾಂಡಗೆ, ಪುಷ್ಪಾ ಬಿಜಾಪುರ, ಆರಾಧನಾ ಬಣಕಾರ, ಈರಮ್ಮ ರಮೇಶ ತಾಳಿಕೋಟಿ, ಕವಿತಾ ಗುಡದೂರ, ಫಕೀರಯ್ಯ ಹಿರೇಮಠ, ಅಶೋಕ ಬಸಟ್ಟಿ, ದಾವಲಸಾಬ್ ನಾಗನೂರ, ವಿನಾಯಕ ಸಂಡೂರು, ರಾಜೇಸಾಬ್ ಪಿಂಜಾರ್ ಮುಂತಾದವರು ಉಪಸ್ಥಿತರಿದ್ದರು.


