ವಿಜಯಸಾಕ್ಷಿ ಸುದ್ದಿ, ಗದಗ: ಅಂಧ-ಅನಾಥರ ಬಾಳಿನ ನಂದಾದೀಪ, ಆಶ್ರಯದಾತರು ಪಂಡಿತ ಡಾ. ಪುಟ್ಟರಾಜ ಗವಾಯಿಗಳು. ಅಂಧರಾದರೂ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಈ ನಾಡು ಕಂಡ ವಿಸ್ಮಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2735ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರು ಶ್ರೇಷ್ಠ ಸಾಧಕರು ಮತ್ತು ಪಂಡಿತರು. ಅನೇಕ ಪುರಾಣ, ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅವರು ಕನ್ನಡ, ಸಂಸ್ಕೃತ, ಹಿಂದಿ ಬಲ್ಲವರಾಗಿದ್ದರು. ಅಂತೆಯೇ ಅವರನ್ನು ತ್ರಿಭಾಷಾ ಕವಿ ಎಂದು ಕರೆಯುತ್ತಾರೆ. ಚಂಪೂ ಕೃತಿಗಳನ್ನು ರಚಿಸಿದ್ದಾರೆ. ಪುಟ್ಟರಾಜರು ಉಭಯಗಾನ ವಿಶಾರದರು. ಅವರು ಕಂಠ, ಸಂಗೀತ ಹಾಗೂ ವಾದ್ಯ ಸಂಗೀತದಲ್ಲಿ ಪರಿಣತಿಯನ್ನು ಪಡೆದಿದ್ದರಿಂದ ಅವರನ್ನು ಉಭಯಗಾನ ವಿಶಾರದರು ಎಂದೂ ಕರೆಯಲಾಗಿದೆ ಎಂದರು.
ಪುಟ್ಟರಾಜ ಕವಿ ಗವಾಯಿಗಳ ಜಯಂತಿ ಪ್ರಯುಕ್ತ ಗದುಗಿನ ಸಿದ್ದಲಿಂಗನಗರದ ಸ.ಪ್ರೌ.ಶಾಲೆಯ ಅಂಧ ಸಂಗೀತ ಶಿಕ್ಷಕರಾದ ನಾಗಪ್ಪ ಆರ್.ಶಿರೋಳ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಿ.ಎಸ್. ಸಂಶಿಮಠ, ರಾಜು ಕುರಡಗಿ, ರಾಜಣ್ಣ ಗುಡಿಮನಿ ಉಪಸ್ಥಿತರಿದ್ದರು. ಸಂಗೀತ ಸೇವೆ ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಅಪೇಕ್ಷಾ ಎಚ್.ಹೊನಗಣ್ಣನವರ ಹಾಗೂ ವಚನ ಚಿಂತನವನ್ನು ಸೃಷ್ಟಿ ವಿ.ಪೂಜಾರ ಮಾಡಿದರು. ದಾಸೋಹ ಸೇವೆಯನ್ನು ಸದಾಶಿವಯ್ಯ ಸಂಗನಬಸವಯ್ಯ ಮದರಿಮಠ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷರಾದ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳರವರು ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷರಾದ ಬಸವರಾಜ ಕಾಡಪ್ಪನವರ ಹಾಗೂ ಭಕ್ತರು ಉಪಸ್ಥಿತರಿದ್ದರು.
ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಸ್ವಾಗತಿಸಿದರು. ಚೇರಮನ್ ಐ.ಬಿ. ಬೆನಕೊಪ್ಪ ಪರಿಚಯಿಸಿದರೆ, ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಗದುಗಿನ ಪಿಪಿಜಿ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಎಂ. ಗುರುಮಠ ಮಾತನಾಡಿ, ಪುಟ್ಟರಾಜರು 75 ಗ್ರಂಥಗಳನ್ನು ಬರೆದಿದ್ದಾರೆ. ಅಂಧತ್ವವಿದ್ದರೂ ವಿಶೇಷ ಕಣ್ಣುಗಳಿಂದ ಸಮಾಜವನ್ನು ನೋಡಿ, ಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮೂಡಿಸಿದರು. ಕನ್ನಡ ಸಂಸ್ಕೃತ, ಹಿಂದಿಯಲ್ಲಿ ಅನೇಕ ಗ್ರಂಥಗಳನ್ನು ಬರೆದರು. ಅವರು ಪೀಠಾಧಿಪತಿಯಾದ ನಂತರ ವೀರೇಶ್ವರ ಪುಣ್ಯಾಶ್ರಮವನ್ನು ತುಂಬಾ ಎತ್ತರಕ್ಕೆ ಬೆಳೆಸಿದರು. ಪಂಚಾಕ್ಷರಿ ನಾಟ್ಯ ಸಂಘವನ್ನು ಸ್ಥಾಪಿಸಿದರು. ಅವರಲ್ಲಿ ಸಂಗೀತ ಅಭ್ಯಾಸ ಮಾಡಿದ ಅನೇಕರು ದೊಡ್ಡ ದೊಡ್ಡ ಸಂಗೀತ ಸಾಧನೆ ಮಾಡಿದ್ದಾರೆ. ಈ ಎಲ್ಲ ಅಂಧರಿಗೆ-ಅನಾಥರಿಗೆ ಆಶ್ರಯ ಕೊಡದೆ ಹೋಗಿದ್ದರೆ ಭಿಕ್ಷೆ ಬೇಡಿ ಬದುಕು ಕಟ್ಟಿಕೊಳ್ಳಬೇಕಾಗುತ್ತಿತ್ತು. ಆದರೆ ಪುಟ್ಟರಾಜರು ಅವರಿಗೆ ಸಂಗೀತ ವಿದ್ಯೆ ಕಲಿಸಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಟ್ಟರು ಎಂದರು.