ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಅಪರಾಧಗಳನ್ನು ನಿಯಂತ್ರಿಸಿ ಸಮಾಜದಲ್ಲಿ ಶಾಂತಿ ಹಾಗೂ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಬುಧವಾರ ಪಟ್ಟಣದ ವಿವಿಧ ಕಡೆಗಳಲ್ಲಿ ಅಪರಾಧ ತಡೆ ಮಾಸಾಚರಣೆಯನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈವೇಳೆ ಎಎಸ್ಐ ಶೇಖರ ಹೊಸಳ್ಳಿ ಮಾತನಾಡಿ, ಅಪರಾಧ ತಡೆಗಟ್ಟುವುದು ಪೊಲೀಸ್ ಇಲಾಖೆಯ ಹೊಣೆಗಾರಿಕೆಯಷ್ಟೇ ಅಲ್ಲ, ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯ. ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನು ಪಾಲನೆಯಿಂದಲೇ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಯುವಜನತೆ ತಪ್ಪು ದಾರಿಗೆ ಹೋಗದಂತೆ ಪಾಲಕರು, ಶಿಕ್ಷಕರು ಹಾಗೂ ಸಮಾಜ ಒಟ್ಟಾಗಿ ಜವಾಬ್ದಾರಿ ನಿರ್ವಹಿಸಬೇಕು. ಅಪರಾಧರಹಿತ ಸಮಾಜ ನಿರ್ಮಾಣ ಹಾಗೂ ಪೊಲೀಸ್-ಜನತೆಯ ನಡುವಿನ ವಿಶ್ವಾಸ ಬಲಪಡಿಸುವುದೇ ಈ ಮಾಸಾಚರಣೆಯ ಮುಖ್ಯ ಗುರಿಯಾಗಿದೆ ಎಂದರು.
ಪೊಲೀಸ್ ಪೇದೆ ಸಂತೋಷ ಘಾಟಗೆ ಮಾತನಾಡಿ, ಸೈಬರ್ ಅಪರಾಧವು ಅಂತರ್ಜಾಲ, ಕಂಪ್ಯೂಟರ್ ಹಾಗೂ ಮೊಬೈಲ್ ತಂತ್ರಜ್ಞಾನಗಳ ದುರುಪಯೋಗದಿಂದ ನಡೆಯುವ ಅಪರಾಧವಾಗಿದೆ. ಇತ್ತೀಚೆಗೆ ಆನ್ಲೈನ್ ವಂಚನೆ, ಬ್ಯಾಂಕ್ ಮೋಸ, ಗುರುತು ಕಳವು, ಸೋಶಿಯಲ್ ಮೀಡಿಯಾ ದೌರ್ಜನ್ಯ ಇವು ಸಾಮಾನ್ಯ. ಅಜ್ಞಾತ ಲಿಂಕ್ಗಳಿಗೆ ಕ್ಲಿಕ್ ಮಾಡದೆ, ಪಾಸ್ವರ್ಡ್ ರಕ್ಷಣೆ ಪಾಲಿಸುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿ, ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಅಗತ್ಯತೆ, ಕಳ್ಳತನ ತಡೆಗಟ್ಟುವ ಕ್ರಮಗಳು ಹಾಗೂ ತುರ್ತು ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದ ಬಸ್ ನಿಲ್ದಾಣ, ಗಣೇಶ್ ಗುಡಿ, ವೀರಣ್ಣನ ಪಾದಗಟ್ಟಿ, ಆಟೋ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಭಿತ್ತಿಪತ್ರಗಳನ್ನು ಹಂಚುವ ಮೂಲಕ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.



