ವಿಜಯಸಾಕ್ಷಿ ಸುದ್ದಿ, ಗದಗ : ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಮೂಲಕ ಬಹುದೊಡ್ಡ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಕಾರಣೀಭೂತರವಾಗಿವೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಜರುಗಿದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
2023ರ ವಿಧಾನಸಭೆ ಚುನಾವಣೆ ನಂತರ ಚುನಾವಣಾ ಭರವಸೆಯ ಮುಂದುವರಿದ ಭಾಗವಾಗಿ ಪಂಚ ಗ್ಯಾರಂಟಿಗಳು ಘೋಷಣೆಯಾದವು. ಈ ಗ್ಯಾರಂಟಿಗಳ ಮೂಲಕ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯಕ್ರಮ ಜಾರಿಗೆ ಬಂದು ವರ್ಷಕ್ಕೆ ರಾಜ್ಯದಲ್ಲಿ 58 ಸಾವಿರ ಕೋಟಿ ರೂ.ಗಳ ಪಂಚ ಗ್ಯಾರಂಟಿ ಯೋಜನೆ ಜಾರಿಯಾಯಿತು ಎಂದರು.
ಅನ್ನಭಾಗ್ಯ ಯೋಜನೆ ಬಡವರಿಗೆ, ಕೂಲಿಕಾರರಿಗೆ, ಶ್ರಮಿಕರಿಗೆ ವರದಾನವಾಗಿದೆ. 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಅಕ್ಕಿ ಬದಲಿಗೆ ನೇರ ಹಣ ವರ್ಗಾವಣೆಗೆ ಸರಕಾರ ನಿರ್ಣಯಿಸಿತು. ಗದಗ ಜಿಲ್ಲೆಯೊಂದರಲ್ಲೇ ಏಪ್ರೀಲ್-2024ರಲ್ಲಿ ಜಿಲ್ಲೆಯ ನೋಂದಾಯಿತ ಅರ್ಹ ಒಟ್ಟು 2,54,144 ಅಂತ್ಯೋದಯ ಹಾಗೂ ಬಿ.ಪಿ.ಎಲ್ ಪಡಿತರ ಕುಟುಂಬಗಳು ಅಂದರೆ ಒಟ್ಟು 8,23,645 ಪಡಿತರ ಫಲಾನುಭವಿ ಸದಸ್ಯರುಗಳಿಗೆ ಒಟ್ಟು ರೂ.12 ಕೋಟಿಗಳನ್ನು ನೇರವಾಗಿ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಒಟ್ಟಾರೆ ಜಿಲ್ಲೆಯ ಅರ್ಹ ಕುಟುಂಬಗಳಿಗೆ ಈ ಯೋಜನೆಯಡಿ 89.32 ಕೋಟಿಗೂ ಅಧಿಕ ಹಣವನ್ನು ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯು ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ. ಈ ಎಲ್ಲ ಯೋಜನೆಗಳ ಮೂಲಕ ಕ್ರಾಂತಿಕಾರಕ ಹೆಜ್ಜೆಯಿಟ್ಟು ನಮ್ಮ ರಾಜ್ಯ ಮುನ್ನುಗ್ಗುತ್ತಿದೆ ಎಂದರು.
ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಕಳೆದ 15 ತಿಂಗಳಲ್ಲಿ ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ. ಹೊಸ ಕಾನೂನು ಮತ್ತು ನೀತಿಯನ್ನು ಅನುಷ್ಠಾನಗೊಳಿಸಿದೆ. ಗದಗ ಜಿಲ್ಲೆಯ ಭೀಷ್ಮ ಕೆರೆ ಪ್ರವಾಸಿ ತಾಣದಲ್ಲಿ 62.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಪ್ರವಾಸಿ ಸ್ನೇಹಿ ಸಂಕಿರ್ಣ ನಿರ್ಮಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ಗದಗ ಶಹರದಲ್ಲಿ ತ್ರೀ ಸ್ಟಾರ್ ಹೋಟೆಲ್ ಕಾಮಗಾರಿಗೆ 9 ಕೋಟಿ, ನಗರದಲ್ಲಿ ಕ್ಯಾಟರಿಂಗ್, ಹಾಸ್ಪಿಟ್ಯಾಲಿಟಿ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಿರ್ಮಾಣಕ್ಕೆ 8 ಕೋಟಿ, ಮಹಾಲಿಂಗಪುರ ಗ್ರಾಮದ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಶಿಬಿರಕ್ಕೆ 7 ಕೋಟಿ, ಸೇರಿದಂತೆ ವಿವಿಧ ಒಟ್ಟು 22 ಕಾಮಗಾರಿಗಳಿಗೆ 49.35 ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ .ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರುಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂದು 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಎಲ್ಲ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಹಾಗೂ ತ್ವರಿತಗತಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯ ಜನತೆಯ ಆರೋಗ್ಯ ರಕ್ಷಣೆ ಹಾಗೂ ಜಿಲ್ಲೆಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಜಿಲ್ಲಾಡಳಿತದ ಮುಖ್ಯ ಉದ್ದೇಶವಾಗಿದೆ. ಈ ದಿಸೆಯಲ್ಲಿ ಜಿಲ್ಲೆಯ ಜನತೆಯ ಸಹಕಾರ ಅಪೇಕ್ಷಿಸುತ್ತಾ ಜಿಲ್ಲೆಯ ಜನತೆಗೆ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಸಚಿವ ಎಚ್.ಕೆ.ಪಾಟೀಲ ಶುಭ ಕೋರಿದರು.