`ಅಮಲಾಪುರ’ಗಳಾಗುತ್ತಿವೆ ಸಾರ್ವಜನಿಕ ಸ್ಥಳಗಳು!

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಮುಂಡರಗಿ ತಾಲೂಕಿನ ಗ್ರಾಮಗಳಲ್ಲಿ ಬಹುತೇಕ ಸಂಜೆಯಾಗುತ್ತಿದ್ದಂತೆ ಗ್ರಾ.ಪಂ ಕಾಂಪೌಡ್ ಹತ್ತಿರ, ರಾತ್ರಿ ಹೊತ್ತು ಕೆರೆಯ ತಟದಲ್ಲಿ ಅಲ್ಲದೆ ಕಾಫಿ-ಟೀ ಕೇಂದ್ರಗಳು ಧೂಮಪಾನದ ಅಡ್ಡೆಗಳಾಗಿ ಬದಲಾಗಿದ್ದು, ಕೋಟ್ಪಾ ಕಾಯ್ದೆ ಇಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಇವರ ಖಾಯಂ ಗ್ರಾಹಕರಾಗಿದ್ದು, ಇವರ ಕೈಗೆ ಕಾಫಿ-ಟೀ, ಹಾಲು ಕೊಡುವ ಬದಲು ಸರಾಯಿ, ಬೀಡಿ, ಸಿಗರೇಟು ಇತ್ಯಾದಿ ನೀಡಿ ಅಮಲೇರಿಸಿಕೊಳ್ಳುವಂತೆ ಮಾಡುತ್ತಿದ್ದರೂ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸಹಿತ ಇತರೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಾನೂನಿನಡಿ ನಿಷೇಧವಿದೆ. ಇದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸು ಹಾಕಲು ಕೂಡ ಅವಕಾಶವಿದೆ. ಕಾನೂನು ಹೀಗೆ ಹೇಳುತ್ತಿದ್ದರೂ ಅಂಗಡಿ ಮಾಲಿಕರು ಲಾಭದ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಈ ಉತ್ಪನ್ನಗಳನ್ನು ನಿರಾತಂಕವಾಗಿ ಮಾರಾಟ ಮಾಡುತ್ತಾ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿದ್ದಾರೆ.

ಇಲ್ಲಿನ ಮೇವುಂಡಿ ಗ್ರಾಮದ ಬಸ್ ನಿಲ್ದಾಣ, ಪ್ರೌಢಶಾಲೆಯ ಪಕ್ಕದ ಅಂಗಡಿ, ಕೊರ್ಲಹಳ್ಳಿ, ಬಾಗೆವಾಡಿ, ಹಿರೇವಡ್ಡಟ್ಟಿ, ಜಂತ್ಲಿ ಶಿರೂರ, ಹೆಸರೂರ, ಶಿವಾಜಿನಗರ, ಕದಾಂಪುರ ಗ್ರಾಮದ ಪ್ರಾಥಮಿಕ ಶಾಲೆಯ ಪಕ್ಕದ ಅಂಗಡಿಗಳಲ್ಲಿ, ಬರದೂರ ಗ್ರಾಮದ ಶಾಲಾ ಪಕ್ಕ ಹೀಗೆ ಡಂಬಳ ಹೋಬಳಿಯಾದ್ಯಂತ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ತಡೆ ನೀಡಲು ಸಮಾಜ ಕಲ್ಯಾಣ ಅಧಿಕಾರಿ ಹುದ್ದೆ ಖಾಲಿ ಇದ್ದರೆ, ಉಳಿದ ತಾಲೂಕಿನಲ್ಲಿರುವ ಅಧಿಕಾರಿಗಳು ಈ ಬಗ್ಗೆ ಯಾವುದೇ ಜಾಗೃತಿ ಕಾರ್ಯ ಹಮ್ಮಿಕೊಳ್ಳುವ, ದಾಳಿ ನಡೆಸುವ ಮುತುವರ್ಜಿ ತೋರುತ್ತಿಲ್ಲ.

ಡಂಬಳ ಗ್ರಾಮದ ಗ್ರಾ.ಪಂ ಆವರಣದ ಹಳೆಯ ಕಟ್ಟದ ಹಿಂದೆ ರಾತ್ರಿಯಾಗುತ್ತಿದ್ದಂತೆ ಯುವಕರು ಮೊಬೈಲ್ ಗೇಮ್‌ಗಳನ್ನು ಆಡುತ್ತಾ ಸಿಗರೇಟ್ ಸುಡುವುದು ಸಾಮಾನ್ಯವಾಗಿದೆ. ಪಾಲಕರ ಉದಾಸೀನತೆ ಅಥವಾ ಅತಿಯಾದ ನಂಬಿಕೆಯೂ ಯುವಕರ ಈ ವ್ಯಸನಕ್ಕೆ ಕಾರಣವಾಗಿದೆ. ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಓದಿಗೆ ತಿಲಾಂಜಲಿಯಿಟ್ಟು ಗೂಡಂಗಡಿಗಳು, ಕಾಫಿ ಬಾರ್‌ಗಳಿಗೆ ಹೋಗಿ ದುಶ್ಚಟಗಳಿಗೆ ದಾಸರಾಗಿ, ಸಮಾಜಘಾತುಕರಾಗಿ ಬದಲಾಗುತ್ತಿರುವುದು ಆತಂಕದ ವಿಚಾರವಾಗಿದೆ.

ಹೋಬಳಿಯ ಕೆಲ ಗ್ರಾಮಗಳಲ್ಲಿ ಗೂಡಂಗಡಿಗಳಲ್ಲಿ ಗಾಂಜಾ, ಸರಾಯಿ, ಸಿಗರೇಟ್ ಮಾರಾಟ ನಡೆಯುತ್ತಿದೆ ಎಂಬ ಅನುಮಾನವನ್ನು ಜನಪರ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ. ಸಂಬAಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸಿ ಅಕ್ರಮ ದಂಧೆಯನ್ನು ತಡೆಯಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಸಾರ್ವಜನಿಕರ ಬಾಯಿಂದ ಕೇಳಿಬರುತ್ತಿರುವ ಮಾತು.

ಶಾಲಾ-ಕಾಲೇಜು ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಸರಾಯಿ, ಸಿಗರೇಟ್, ಗಾಂಜಾ ಮಾರಾಟವನ್ನು ತಡೆಯುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಆದರೆ, ಇದಕ್ಕೆ ಸಂಬAಧಿಸಿದ ಅಧಿಕಾರಿಗಳು ಕೂಡ ಇದರಲ್ಲಿ ಶಾಮಿಲಾಗಿರುವ ಅನುಮಾನ ಮೂಡುತ್ತಿದೆ. ಕಾರಣ, ಅದೆಷ್ಟೋ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇವುಗಳ ತಡೆಗೆ ಸೂಕ್ತ ಕ್ರಮ ವಹಿಸಬೇಕಿದೆ

– ಶಿವಪ್ಪ ಬಿಡನಾಳ.

ಸಾಮಾಜಿಕ ಹೋರಾಟಗಾರ.


Spread the love

LEAVE A REPLY

Please enter your comment!
Please enter your name here