HomeGadag Newsಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಜಾಗೃತರಾಗಿ: ನ್ಯಾಯಾಧೀಶ ಶಿವನಗೌಡ್ರ

ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರು ಜಾಗೃತರಾಗಿ: ನ್ಯಾಯಾಧೀಶ ಶಿವನಗೌಡ್ರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯನ್ನು ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಸಮಸ್ತ ಮಹಾಜನತೆ ಪ್ರಜ್ಞಾವಂತಿಕೆಯಿಂದ ಕೈಜೋಡಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಸ್. ಶಿವನಗೌಡ್ರ ಹೇಳಿದರು.

ಅವರು ಸೋಮವಾರ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಗದಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಗದಗ ಹಾಗೂ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಆಶ್ರಯದಲ್ಲಿ ಜರುಗಿದ `ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಎಲ್ಲ ಅಧಿಕಾರಿಗಳೂ ಭ್ರಷ್ಟರಲ್ಲ. ಕರ್ತವ್ಯನಿಷ್ಠೆ, ಪ್ರಾಮಾಣಿಕತೆಯುಳ್ಳ ದಕ್ಷ ಅಧಿಕಾರಿಗಳೂ ಇದ್ದಾರೆ. ಭ್ರಷ್ಟ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಪಡೆಯುವುದು ಎಷ್ಟು ಅಪರಾಧವೋ, ಸಾರ್ವಜನಿಕರು ಅಧಿಕಾರಿಗಳಿಗೆ ಲಂಚ ಕೊಟ್ಟು ತಮ್ಮ ಕೆಲಸ ಮಾಡಿಸಿಕೊಳ್ಳುವುದು ಕೂಡ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡಿದಂತೆ ಎಂದರು.

ಭ್ರಷ್ಟಾಚಾರ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ-ಪುರಾವೆ ಒದಗಿಸುವವರು ಹೆದರುವ ಅಗತ್ಯವಿಲ್ಲ. ನಿರ್ಭೀತಿಯಿಂದ, ಧೈರ್ಯದಿಂದ ಮುಂದೆ ಬರಬೇಕು. ಇಂತಹ ವ್ಯಕ್ತಿಗಳಿಗೆ ಕಾನೂನು ಭದ್ರತೆ ಇದೆ. ಆದ್ದರಿಂದ ಧೈರ್ಯದಿಂದ ಬದುಕಿ, ನ್ಯಾಯಯುತವಾಗಿ ಬದುಕಿ ಎಂದರು.

ಪ್ರಜ್ಞಾವಂತರು ಸೇರಿದಂತೆ ಜನಸಾಮಾನ್ಯರೂ ಕೂಡ ಭ್ರಷ್ಟಾಚಾರದ ವಿರುದ್ಧ ಜಾಗೃತರಾಗಬೇಕು. ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ವ ಜನತೆ ಪ್ರಜ್ಞಾವಂತಿಕೆಯಿಂದ ಮುಂದೆ ಬರಬೇಕು. ಅನ್ಯಾಯ, ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರೆಯಬೇಕು. ಅಗತ್ಯವಿದ್ದವರಿಗೆ ಅವರ ಸ್ಥಿತಿಯನ್ನು ಅರಿತು ಉಚಿತ ಕಾನೂನು ಸೇವೆ ನೀಡಿ ನ್ಯಾಯ ಒದಗಿಸಲು ಅವಕಾಶವಿದ್ದು, ಸಾರ್ವಜನಿಕರು ಕಾನೂನು ಸೇವೆಗಳ ಪ್ರಾಧಿಕಾರದ ಸೇವೆಯನ್ನು ಪಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಗದಗ ಜಿಲ್ಲಾ ಲೋಕಾಯುಕ್ತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಗದಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೊಳ್ಳಲು ಸಾರ್ವಜನಿಕರೂ ಸಹಕಾರ ನೀಡಬೇಕು. ಭ್ರಷ್ಟ ವ್ಯವಸ್ಥೆಯು ಸ್ವಚ್ಛಂದ ಆಡಳಿತವಾಗಿ ರೂಪುಗೊಳ್ಳಲು ಸರ್ವ ಮಹಾಜನತೆ ಪ್ರಜ್ಞಾವಂತಿಕೆಯಿಂದ ಸಾಮಾಜಿಕ ಕಳಕಳಿಯೊಂದಿಗೆ ಮುಂದಾಗಬೇಕೆಂದರು.

ಮೋಹನ ಕೋಟಿ, ವಿರೂಪಾಕ್ಷಗೌಡ ದೇಸಾಯಿಗೌಡ್ರ, ದತ್ತು ಬೇವಿನಕಟ್ಟಿ ಸೇರಿದಂತೆ ಹಲವರು ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಮಾತನಾಡಿ, ಈ ರೀತಿಯ ಜಾಗೃತಿ ಅರಿವು ಸಪ್ತಾಹ ಕೇವಲ ಸಾಂಕೇತಿಕವಾಗಬಾರದು. ನಿತ್ಯ ಜಾಗೃತಿ ಮೂಡಿಸುವಂತಾಗಲಿ. ಇದಕ್ಕೆ ಸಾರ್ವಜನಿಕರೂ ಸಹ ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕೆಂದರು.

ಚೇಂಬರ್ ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ ಸ್ವಾಗತಿಸಿ ನಿರೂಪಿಸಿದರು. ಉಪಾಧ್ಯಕ್ಷ ಜಯದೇವ ಮೆಣಸಗಿ ವಂದಿಸಿದರು. ಉಪಾಧ್ಯಕ್ಷರಾದ ಪ್ರಕಾಶ ಉಗಲಾಟದ, ಸಿದ್ರಾಮಪ್ಪ ಉಮಚಗಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಕೊಳ್ಳಿ ಸೇರಿದಂತೆ ಪ್ರಗತಿಪರ, ಸಮಾಜಮುಖಿ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!