ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದ ಸೌಂದರ್ಯವನ್ನು ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಂಡಿದ್ದು, ಕೋಟ್ಯಾಂತರ ರೂಗಳನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ 1ನೇ ವಾರ್ಡಿನ ಸುಭಾಸ ನಗರದಲ್ಲಿ ಜರುಗಿದ ಪ್ರವಾದಿಗಳ ಜನ್ಮ ದಿನಾಚರಣೆ ಮತ್ತು 75 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಸನ್ಮಾನ, ಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಪಟ್ಟಣದ ಜನತೆ ಏಕತೆಯಿಂದ ಪ್ರವಾದಿಗಳ ಜನ್ಮ ದಿನಾಚರಣೆಯನ್ನು ಆಚರಿಸಿ, ಎರಡು ದಿನಗಳ ಕಾರ್ಯಕ್ರಮವನ್ನು ನೆರವೇರಿಸಿದ್ದು ಸಂತಸದ ಸಂಗತಿ. ಪುರಸಭಾ ಸದಸ್ಯ ಮಲ್ಲಯ್ಯ ಮಹಾಪುರುಷಮಠ ಎಲ್ಲ ಸಮುದಾಯದಲ್ಲಿನ 75 ವಸಂತಗಳನ್ನು ಪೂರೈಸಿರುವ ಹಿರಿಯರನ್ನು ಗುರುತಿಸಿ ಗೌರವಿಸಿದ್ದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದಂತಾಗಿದೆ. ಸಮಾಜದಲ್ಲಿನ ಯುವಕರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂಬ ಅಮೂಲ್ಯ ಸಂದೇಶ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದರು.
ರೋಣ ಪಟ್ಟಣ ಅಭಿವೃದ್ಧಿಯಾಗಬೇಕು ಎಂಬುದು ನನ್ನನ್ನೂ ಸೇರಿ ಪಟ್ಟಣದ ಜನತೆಯ ಇಚ್ಛೆ. ಎಲ್ಲ ವಾರ್ಡಿನ ಜನರು ಕೆಲಸ ಕೇಳುತ್ತೀರಿ. ಆದರೆ, ವಾರ್ಡಿನ ಸದಸ್ಯರುಗಳು ಕೆಲಸ ಮಾಡಲು ಬಂದರೆ ತಕರಾರು ತೆಗೆಯುತ್ತೀರಿ. ಹೀಗಾದರೆ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ ಶಾಸಕರು, ಹೊರಗಿನಿಂದ ಬಂದ ಜನರು ರೋಣ ಪಟ್ಟಣದ ಸೌಂದರ್ಯವನ್ನು ಕಂಡು ಮೆಚ್ಚಿಕೊಳ್ಳುವಂತಹ ಅಂತಹ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಣಕ್ಕೆ ತಂದಿದ್ದೇನೆ. ನಾಗರಿಕರು ಸಹಕರಿಸಿ, ಪಟ್ಟಣದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಹಿರೇಮಣ್ಣೂರಿಂದ ಪಟ್ಟಣದ ಮೂಲಕ ಕೊತಬಾಳ ಗ್ರಾಮದ ರಸ್ತೆಯವರೆಗೆ 5-6 ಕಿ.ಮೀ ವರೆಗಿನ ರಸ್ತೆಯನ್ನು ಡಾಂಬರೀಕರಣಗೊಳಿಸಲಾಗುವುದು. ಈ ರಸ್ತೆಯ ಮೂಲಕ ಬಸ್‌ಗಳು ಸಂಚಾರ ಮಾಡಬಹುದಾಗಿದ್ದು, ಈ ರಸ್ತೆ ಹೊಳೆಆಲೂರ, ಬದಾಮಿ ರಸ್ತೆಯನ್ನು ಸಹ ಸಂಪರ್ಕಿಸುವುದರಿಂದ ಪಟ್ಟಣದ ವ್ಯಾಪಾರ-ವಹಿವಾಟುಗಳು ಮತ್ತಷ್ಟು ಪ್ರಗತಿಯತ್ತ ಸಾಗುತ್ತವೆ. ಪಟ್ಟಣದ ಮದ್ಯ ಭಾಗದಲ್ಲಿರುವ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು ಎಂದರು.
ಗುರುಪಾದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹಜರತ್ ಸುಲೇಮಾನ್ ಶಾವಲಿ ಅಜ್ಜನವರು ನೇತೃತ್ವ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಐ.ಎಸ್. ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಸಿದ್ದಣ್ಣ ಬಂಡಿ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಎಚ್.ಎಸ್. ಸೋಂಪುರ, ಪರಶುರಾಮ ಅಳಗವಾಡಿ, ಯೂಸುಫ್ ಇಟಗಿ, ವಿ.ಬಿ. ಸೋಮನಕಟ್ಟಿಮಠ, ಬಸವರಾಜ ನವಲಗುಂದ, ಮಲ್ಲಯ್ಯ ಮಹಾಪುರುಷಮಠ, ನಾಜಬೇಗಂ ಯಲಿಗಾರ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ವಾರ್ಡಿನ ಮುಖಂಡರು ಉಪಸ್ಥಿತರಿದ್ದರು.
ಆಶ್ರಯ ಪ್ಲಾಟಿನ ಹಕ್ಕುಪತ್ರ ವಿತರಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಅಧಿಕಾರಿಗಳು ಹಕ್ಕುಪತ್ರ ವಿತರಣೆಯಲ್ಲಿ ಮಗ್ನರಾಗಿದ್ದಾರೆ. 1ನೇ ವಾರ್ಡಿನಲ್ಲಿರುವ ಕೆಲ ಸಮಸ್ಯೆಗಳ ಬಗ್ಗೆ ವಿವರಿಸಿದ್ದೀರಿ. ಈಗಾಗಲೇ ಎಲ್ಲ ವಾರ್ಡಿನ ಕಾಮಗಾರಿಗಳಿಗೆ ಅನುದಾನವನ್ನು ಒದಗಿಸಲಾಗಿದೆ. ಪುರಸಭೆಯವರು ಶೀಘ್ರವೇ ಕಾಮಗಾರಿಗಳನ್ನು ನೆರವೇರಿಸಲಿದ್ದು, ವಾರ್ಡಿನ ಸಮಸ್ತ ನಾಗರಿಕರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.