ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾದ ಪಟ್ಟಣದಲ್ಲಿ ಪ್ರತಿಯೊಬ್ಬರ ನಿತ್ಯದ ಅವಶ್ಯಕತೆಗಳಲ್ಲೊಂದಾದ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಮುಖ್ಯವಾಗಿ ಮಹಿಳೆಯರು ಶೌಚಕ್ರಿಯೆಗಾಗಿ ಪರದಾಡುವ ಸ್ಥಿತಿಯಂತೂ ಹೇಳತೀರದು.
ಪಟ್ಟಣದ ಶಿಗ್ಲಿ ನಾಕಾದಿಂದ ದೂದಪೀರಾಂ ದರ್ಗಾ 1 ಕಿ.ಮೀ ಅಂತರದಲ್ಲಿ ಇರುವುದು ಪುರಸಭೆಯ ಕಂಪೌಂಡ್ ಗೋಡೆಗೆ ಹೊಂದಿಕೊಂಡಿರುವ ಒಂದು ಶೌಚಾಲಯ ಮಾತ್ರ. ಅದೂ ನಿರ್ವಹಣೆಯ ಕೊರತೆಯಿಂದ ನರಳುತ್ತಿದೆ. ಕಳೆದ 1 ತಿಂಗಳಿಂದ ದುರಸ್ಥಿಗೊಳಗಾಗಿ ಬೀಗ ಹಾಕಲಾಗಿದೆ. ಒಂದು ಕಡೆ ಪುರುಷರಿಗೆ ಮತ್ತೊಂದು ಕಡೆ ಮಹಿಳೆಯರಿಗೆ ವ್ಯವಸ್ಥೆ ಇರುವ ಶೌಚಾಲಯ ಬಂದ್ ಮಾಡಿದರೂ ನಿಸರ್ಗ ಭಾದೆ ತೀರಿಸುವ ಅನಿವಾರ್ಯತೆಯಿಂದ ಶೌಚಾಲಯದ ಬಾಗಿಲ ಮರೆಯಲ್ಲಿಯೇ ಗಲೀಜು ಮಾಡುತ್ತಿರುವುದನ್ನು ತಪ್ಪಿಸಲು ಒಳ ಹೋಗುವ ದಾರಿಗೆ ಕಲ್ಲು ಮುಳ್ಳಿನ ಕಂಟಿ ಹಾಕಿರುವು ನಿರ್ಲಕ್ಷಕ್ಕೆ ಹಿಡಿದ ಕನ್ನಡಿ.
ಇರುವ ಒಂದು ಶೌಚಾಲಯವೂ ಈ ರೀತಿ ಬಂದ್ ಮಾಡಿರುವ ಪುರಸಭೆಯ ಕ್ರಮಕ್ಕೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ನಿತ್ಯ ವ್ಯಾಪಾರ-ವಹಿವಾಟು, ಶಿಕ್ಷಣ, ಉದ್ಯೋಗ, ಆಸ್ಪತ್ರೆ ಹೀಗೆ ಅನೇಕ ಕಾರಣಗಳಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಪುರುಷರು ಹೇಗೋ ನಿಭಾಯಿಸುತ್ತಾರಾದರೂ, ಮಹಿಳೆಯರ ಗೋಳು ಕೇಳುವವರೇ ಇಲ್ಲದಂತಾಗಿದೆ. ಪುರಸಭೆಯ ಬಾಗಿಲಲ್ಲೇ ಇರುವ ಶೌಚಲಾಯಕ್ಕೆ ಮುಳ್ಳು ಹಚ್ಚಿದ್ದರೂ ಪುರಸಭೆಯ ಅಧಿಕಾರಿಗಳಿಗೆ ಕಾಣದಂತಾಗಿದೆ.
ಪುರಸಭೆಯ ಅಧ್ಯಕ್ಷರು ಸೇರಿದಂತೆ ಇರುವ 23 ಸದಸ್ಯರಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದು, ಈ ಬಗ್ಗೆ ಗಮನ ಹರಿಸಬೇಕು ಎಂಬುದು ಮಹಿಳೆಯರು ಒತ್ತಾಯಿಸಿದ್ದಾರೆ.