ನಿರ್ಮಲ ಮನಸ್ಸಿನಿಂದ ಶ್ರಮಿಸಿದರೆ ಜನಕಲ್ಯಾಣ ಸಾಧ್ಯ: ರಂಭಾಪುರಿ ಶ್ರೀ

0
???????
Spread the love

ವಿಜಯಸಾಕ್ಷಿ ಸುದ್ದಿ, ಕುಷ್ಟಗಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದೆ. ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರು. ಖಾದಿ, ಖಾಕಿ ಮತ್ತು ಕಾವಿ ಜನಾಂಗವು ನಿರ್ಮಲ ಮನಸ್ಸಿನಿಂದ ಶ್ರಮಿಸಿದರೆ ಜನಕಲ್ಯಾಣದ ಜೊತೆಗೆ ಲೋಕ ಕಲ್ಯಾಣವಾಗುವುದರಲ್ಲಿ ಸಂದೇಹ ಇಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಗುರುವಾರ ತಾಲೂಕಿನ ಚಳಗೇರಾ ಹಿರೇಮಠದ ಲಿಂ. ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ 11ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ನವೀಕೃತ ಹಿರೇಮಠದ ಉದ್ಘಾಟನೆಯ ಅಂಗವಾಗಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ನಾಡಿನ ಮಠಗಳು ಹಾಗೂ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಸಂವರ್ಧನಾ ಕೇಂದ್ರಗಳಾಗಿವೆ. ಜನ ಮನವನ್ನು ತಿದ್ದುವ ಮತ್ತು ರಾಷ್ಟ್ರಭಿಮಾನವನ್ನು ಬೆಳೆಸುವ ಅದ್ಭುತ ತಾಣಗಳಾಗಿವೆ. ಜನರು ಯತಾರ್ಥ ಅರಿತು ಸಾತ್ವಿಕ, ಸಮೃದ್ಧ ನಾಡನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಧ್ಯಾನ, ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆ ಮಾಡುವುದರಿಂದ ವ್ಯಕ್ತಿಯ ಆತ್ಮಸ್ಥೈರ್ಯ ಮತ್ತು ಮನೋಬಲ ವೃದ್ಧಿ ಸಾಧ್ಯವಾಗುತ್ತದೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ದೊಡ್ಡದು. ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸಮಾಜವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಯುವ ಜನಾಂಗ ಗಟ್ಟಿ ಹೆಜ್ಜೆಯನ್ನಿಡುವ ಅಗತ್ಯವಿದೆ ಎಂದರು.

ನೇತೃತ್ವ ವಹಿಸಿದ ಚಳಗೇರಾ ಹಿರೇಮಠದ ವೀರಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮ ಮತ್ತು ಆಧ್ಯಾತ್ಮ ಸಾಧನೆಯಲ್ಲಿ ಬಹು ದೊಡ್ಡ ಶಕ್ತಿಯಿದೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಲಿಂ. ವಿರೂಪಾಕ್ಷ ಶಿವಾಚಾರ್ಯರು ಯಾರನ್ನೂ ಕಾಡದೇ ಬೇಡದೇ ಎಲ್ಲ ಜನಾಂಗದವರನ್ನು ವಾತ್ಸಲ್ಯದಿಂದ ಕಂಡು ಅವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ ಎಂದರು.

ಹೈದರಾಬಾದಿನಲ್ಲಿ ವಾಸವಾಗಿರುವ ಹೊಸಳ್ಳಿಯ ಕುಮಾರಸ್ವಾಮಿ ಹಿರೇಮಠರಿಗೆ ‘ಉದ್ಯಾನ್ಯ ಶಿಲ್ಪಿ’ ಪ್ರಶಸ್ತಿ ಮತ್ತು ಬೆಂಗಳೂರಿನಲ್ಲಿ ವಾಸವಾಗಿರುವ ಹಿರೇಕೊಡಗಲಿಯ ಪಂಚಾಕ್ಷರಿ ಹಿರೇಮಠ ಅವರಿಗೆ ‘ವೀರಶೈವ ಯುವಸಿರಿ’ ಪ್ರಶಸ್ತಿಯನ್ನು ಉಭಯ ಜಗದ್ಗುರುಗಳು ಪ್ರದಾನ ಮಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಿ.ಎಸ್. ಪಾಟೀಲ, ಮಾಜಿ ಶಾಸಕರಾದ ಕೆ. ಶರಣಪ್ಪ ವಕೀಲರು, ಹಸನಸಾಬ ದೋಟಿಹಾಳ ಪಾಲ್ಗೊಂಡು ಗುರುರಕ್ಷೆ ಸ್ವೀಕರಿಸಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶವಿಧ ಸೂತ್ರಗಳು ಸಕಲರ ಬಾಳಿನಲ್ಲಿ ಬೆಳಕು ಮೂಡಿಸುತ್ತವೆ. ಲಿಂ. ಶ್ರೀ ವಿರೂಪಾಕ್ಷ ಶ್ರೀಗಳವರು ಒಬ್ಬ ಆಧ್ಯಾತ್ಮ ಸಾಧಕರಾಗಿದ್ದು ವೀರಶೈವ ಧರ್ಮ ಸಂಸ್ಕೃತಿಯನ್ನು ಜನಮನಕ್ಕೆ ತಲುಪಿಸಿದ ಶ್ರೇಯಸ್ಸು ಅವರದು. ಇಂದಿನ ವೀರಸಂಗಮೇಶ್ವರ ಶ್ರೀಗಳು ಮಠದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here