ಪುಣೆ: ಇಲ್ಲಿನ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ರಾಜ್ಯ ಸಾರಿಗೆ ಬಸ್ಸಿನೊಳಗೆ 26 ವರ್ಷದ ಮಹಿಳೆಯ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪುಣೆ ನಗರ ಪೊಲೀಸರು, 37 ವರ್ಷದ ಆರೋಪಿಯನ್ನು ಕೊನೆಗೂ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಸುಮಾರು 75 ಗಂಟೆಗಳ ಕಾಲ ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿ, ಶ್ರೀರೂರ್ ತಹಸಿಲ್‌ನಿಂದ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಮಂಗಳವಾರ ಬೆಳಿಗ್ಗೆ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆತ ಆರಂಭದಲ್ಲಿ ಮಹಳೆಯನ್ನು ಅಕ್ಕ ಎಂದು ಕರೆದು ಮಾತಾಡಿಸಿದ್ದ.
ಬಳಿಕ ಸತಾರಾಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಂದಿದೆ ಎಂದು ಹೇಳಿ, ನಿಲ್ಲಿಸಿದ್ದ ಖಾಲಿ ಬಸ್ ಬಳಿ ಕರೆದೊಯ್ದಿದ್ದ. ಮಹಿಳೆ ಬಸ್ಸಿನೊಳಗೆ ಲೈಟ್ ಆನ್ ಇರದ ಕಾರಣ ಬಸ್ ಹತ್ತಲು ಹಿಂಜರಿದಿದ್ದಳು. ಈ ವೇಳೆ, ಇದೇ ಸರಿಯಾದ ಬಸ್ ಎಂದು ಹೇಳಿ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಆರೋಪಿಯು ಹಲವಾರು ತಿಂಗಳುಗಳಿಂದ ಪೊಲೀಸರ ಸೋಗಿನಲ್ಲಿ ಓಡಾಡಿಕೊಂಡಿದ್ದ ಎಂದು ಹೇಳಲಾಗಿದೆ. ಆತನ ವಿರುದ್ಧ ಪುಣೆ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಮತ್ತು ಸರಗಳ್ಳತನದ ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಆತ 2019ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಆರೋಪಿಗಳನ್ನು ಬಂಧಿಸಲು ಮಹಾರಾಷ್ಟ್ರದಾದ್ಯಂತ ಒಟ್ಟು 13 ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿತ್ತು. ಶೋಧ ಕಾರ್ಯಾಚರಣೆಯ ಭಾಗವಾಗಿ ಸ್ನಿಫರ್ ಡಾಗ್ಸ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿತ್ತು. ಆರೋಪಿ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ ಪುಣೆ ಪೊಲೀಸರು ಈ ಹಿಂದೆ 1 ಲಕ್ಷ ರೂ. ನಗದು ಬಹುಮಾನವನ್ನು ಸಹ ಘೋಷಿಸಲಾಗಿತ್ತು.