ಗದಗ Exclusive: ನಿಧಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಭಾರೀ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಗಣರಾಜ್ಯೋತ್ಸವದಂದು ಐದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿ ಸರ್ಕಾರ ಬಿಲ್ಡಪ್ ಪಡೆದಿದ್ದರೂ, 10 ದಿನಗಳು ಕಳೆದರೂ ಹಣ ಕುಟುಂಬದ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ.
ಗಣರಾಜ್ಯೋತ್ಸವದಂದು ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಐದು ಲಕ್ಷ ರೂ. ಮಂಜೂರು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಘೋಷಣೆ ಕೇವಲ ಪತ್ರದಲ್ಲೇ ಉಳಿದಿದ್ದು, ವಾಸ್ತವದಲ್ಲಿ ಹಣ ಇದುವರೆಗೂ ಕುಟುಂಬದ ಕೈ ಸೇರಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ತಿಳಿಯಲು ಕುಟುಂಬಸ್ಥರು ಪ್ರತಿದಿನ ಬ್ಯಾಂಕ್ಗೆ ಅಲೆದಾಡುತ್ತಿದ್ದು, ಅಲೆದಾಡಿ ಅಲೆದಾಡಿ ಸುಸ್ತಾಗಿದ್ದಾರೆ. ಮನೆ ಕಟ್ಟಿಕೊಳ್ಳಲು ಹಣಕ್ಕಾಗಿ ಬಕಪಕ್ಷಿಯಂತೆ ಕಾಯುವ ಪರಿಸ್ಥಿತಿಗೆ ಕುಟುಂಬ ಬಂದು ತಲುಪಿದೆ. ಇನ್ನೊಂದೆಡೆ, ಕುಟುಂಬಕ್ಕೆ ನೀಡುವುದಾಗಿ ಹೇಳಿರುವ ಸೈಟ್ ಕುರಿತೂ ಗೊಂದಲ ಮುಂದುವರೆದಿದೆ. ಪಂಚಾಯತಿಯಿಂದ ಸೈಟ್ ನೀಡಲಾಗಿದೆ ಎನ್ನಲಾಗಿದ್ದರೂ, ಪ್ಲಾಟ್ ನಂಬರ್ ಯಾವುದು ಎಂಬುದನ್ನು ಇದುವರೆಗೂ ತಿಳಿಸಿಲ್ಲ. ಯಾವ ಸೈಟ್ ಕೊಡಲಾಗುತ್ತದೆ ಎಂಬುದೇ ಕುಟುಂಬಕ್ಕೆ ಸ್ಪಷ್ಟವಾಗಿಲ್ಲ.
ನಿಧಿ ಸಿಕ್ಕ ಮೂರೇ ತಾಸಿನಲ್ಲಿ ಇಡೀ ಜಿಲ್ಲಾಡಳಿತ ಲಕ್ಕುಂಡಿಗೆ ದೌಡಾಯಿಸಿದ್ದರೂ, ತಿಂಗಳು ಕಳೆದರೂ ಮಾತು ಕೊಟ್ಟಂತೆ ನಡೆದುಕೊಳ್ಳದಿರುವುದು ಸರ್ಕಾರದ ನೈತಿಕತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಪ್ರಾಮಾಣಿಕತೆಗೆ ಗೌರವ ಎನ್ನುವುದು ಕೇವಲ ಘೋಷಣೆಯಲ್ಲೇ ಉಳಿದಿತೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.



