ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಮಾಜದಲ್ಲಿನ ಡಾಂಭಿಕ ಜೀವನ, ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ನೇರವಾಗಿ ವಚನಗಳ ಮೂಲಕ ಖಂಡಿಸಿ ಸತ್ಯದರ್ಶನ ಮಾಡಿಸಿದ ಅಂಬಿಗರ ಚೌಡಯ್ಯ ನಿಷ್ಠುರವಾದಿ ಶರಣರಾಗಿದ್ದರು ಎಂದು ವರ್ಷಾ ಬಾರಕೇರ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿಗಳ ಗವಿಮಠದಲ್ಲಿ ಜರುಗಿದ ಶ್ರಾವಣ ಮಾಸದ ಪುರಾಣ ಪ್ರವಚನದಲ್ಲಿ ಉಪನ್ಯಾಸ ನೀಡಿ, 12ನೇ ಶತಮಾನವು ಶಿವ ಶರಣರ ಶತಮಾನವಾಗಿತ್ತು. ಶೋಷಿತ ಜನರ ದುಃಖ-ದುಮ್ಮಾನುಗಳ ದನಿಯಾಗಿತ್ತು. ವ್ಯವಸ್ಥೆಯನ್ನು ನೇರವಾಗಿ ಖಂಡಿಸುವುದೇ ಕಷ್ಟವಾಗಿದ್ದ ಅಂತಹ ಸಮಯದಲ್ಲಿ ಅಂಬಿಗರ ಚೌಡಯ್ಯ ಸೈದ್ಧಾಂತಿಕ ನಿಲುವಿನೊಂದಿಗೆ ನಿಷ್ಠುರವಾಗಿ ವಚನಗಳ ಮೂಲಕ ಸತ್ಯ, ನಿಷ್ಠೆಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದು ಇಂದಿನ ಆಧುನಿಕ ಕಾಲದಲ್ಲೂ ಅವರ ವಚನ ಸಾಹಿತ್ಯ ನಮಗೆಲ್ಲ ದಾರಿದೀಪವಾಗಿವೆ ಎಂದರು.
ವೇದಮೂರ್ತಿ ಪಂಚಾಕ್ಷರಯ್ಯ ಮರಿದೇವರಮಠ ಪುರಾಣ ಪ್ರವಚನ ನೀಡಿದರು. ಬಾಲಲೀಲಾ ಮಾಹಾಂತ ಶಿವಯೋಗಿ ಶಿಕ್ಷಣ ಸಮಿತಿಯ ಅಧ್ಯಕ್ಷ ಎಂ.ಡಿ. ಬಟ್ಟೂರ, ರಾಮಣ್ಣಾ ಕಮಾಜಿ, ಮುರುಗೇಶ ನಪೂರಿಮಠ, ಶಿವಪ್ಪ ಮಡ್ಡಿ, ಮಾಹಾಂತೇಶ ಬಳ್ಳಾರಿ, ವಿಜಯಲಕ್ಷಿö್ಮ ಹಿರೇಮಠ ಇದ್ದರು.