ವಿಜಯಸಾಕ್ಷಿ ಸುದ್ದಿ, ಗದಗ: ಮನುಷತ್ವ, ಮಾನವೀಯತೆ, ಅಹಿಂಸೆ, ಸತ್ಯ, ನಿಷ್ಠೆಯನ್ನು ಹಾಗೂ ಧರ್ಮ ಜಾಗೃತಿಯನ್ನು ಮೂಡಿಸುವ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದ ಗುರುದೇವ ಪುಷ್ಕರ್ ಮುನಿಜೀಯವರ ತತ್ವ-ಆದರ್ಶಗಳು ನಮಗೆಲ್ಲ ಮಾದರಿಯಾಗಿವೆ ಎಂದು ಆಚಾರ್ಯ ಪೂಜ್ಯ ಶ್ರೀ ವಿಮಲಸಾಗರ ಸುರಜೀ ಹೇಳಿದರು.
ಅವರು ಶನಿವಾರ ಗದುಗಿನ ಅಬ್ಬಿಗೇರಿ ಕಂಪೌಂಡ್ (ತಿಸ್ ಬಿಲ್ಡಿಂಗ್) ಹತ್ತಿರದ ಜೈನ ಸ್ಥಾನಕ ಭವನದಲ್ಲಿ ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಶ್ರಾವಕ ಸಂಘ ಹಾಗೂ ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ ಯುವಕ ಮಂಡಳ ಏರ್ಪಡಿಸಿದ್ದ ಸಾಧನಾ ಶಿಖರ ಪುರುಷ ವಿಶ್ವಸಂತ ಉಪಾಧ್ಯಾಯ ಪೂಜ್ಯ ಗುರುದೇವ ಶ್ರೀ ಪುಷ್ಕರ್ ಮುನಿಜೀ ಮಹಾರಾಜ ಸಾಹೇಬ ಅವರ 116ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.
ಪೂಜ್ಯ ಗುರುದೇವ ಶ್ರೀ ಹುಸ್ಕರ್ ಮುನಿಜೀ ಮಹಾರಾಜ ಸಾಹೇಬ ಅವರ ಜಯಂತಿ ಕೇವಲ ಸಾಂಕೇತಿಕ ಕಾರ್ಯಕ್ರಮ ಆಗಬಾರದು. ಪುಷ್ಕರ್ ಮುನಿಜೀ ಅವರು ಬೋಧಿಸಿದ ಧರ್ಮ ಚಿಂತನೆ, ತತ್ವ ಸಂದೇಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಅಂತೆಯೇ ನಡೆದುಕೊಂಡಲ್ಲಿ ಮಾತ್ರ ನಾವು ಅವರಿಗೆ ಸಲ್ಲಿಸುವ ಗೌರವ ಜೊತೆಗೆ ನಮ್ಮ ಬದುಕು ಸನ್ಮಾರ್ಗದಲ್ಲಿ ಸಾಗುವುದು ಎಂದರು.
ಜಯಂತಿಯ ನಿಮಿತ್ತ ಏರ್ಪಡಿಸಿದ್ದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದರು. ಮಹಾಪ್ರಸಾದದ ಭಕ್ತಿ ಸೇವೆಯನ್ನು ಗದುಗಿನ ವರ್ಧಮಾನ ಸ್ಥಾನಕವಾಸಿ ಜೈನ ಯುವಕ ಮಂಡಳ, ಬಾಗಮಾರ ಇಂಡಸ್ಟ್ರೀಸ್, ಮರುಧರ ಎಲೆಕ್ಟ್ರಾನಿಕ್ಸ್, ಸಂಗಮ ಬಜಾರ, ಜನತಾ ಟ್ರೇಡರ್ಸ್, ಲಾಬಚಂದ ಲುಂಕಡ ವಹಿಸಿಕೊಂಡಿದ್ದರು.
ಜೈನ ಯುವಕ ಮಂಡಳದ ಅಧ್ಯಕ್ಷ ರಾಹುಲ್ಕುಮಾರ ಬಾಫಣಾ, ಸಮಾಜದ ಹಿರಿಯರಾದ ರೂಪಚಂದ ಪಾಲರೇಚಾ, ದೀಪಕಚಂದ ಬಾಗಮಾರ, ದೀಪಕಚಂದ ತಾತೇಡ, ಪೃಥ್ವಿರಾಜ ಭಂಡಾರಿ, ಮೂಲಚಂದ ಸಂಕಲೇಚಾ, ನಲೀನ ಬಾಗಮಾರ, ನರೇಶ ಜೈನ್ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
ಗದಗ ನಗರ ಸೇರಿದಂತೆ ಗದಗ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಜೈನ ಸಮಾಜ ಬಾಂಧವರು ಗದುಗಿನಲ್ಲಿ ನಡೆಯುತ್ತಿರುವ ಚಾತುರ್ಮಾಸ ಧಾರ್ಮಿಕ ಚಿಂತನ, ಧರ್ಮೋಪದೇಶ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರದ್ಧೆ ಮತ್ತು ಭಕ್ತಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಗದುಗಿನ ಜೈನ್ ಮಹಾಜನತೆ ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ರೂಪಿಸಿರುವುದು ಶ್ಲಾಘನೀಯ ಎಂದು ಆಚಾರ್ಯರು ನುಡಿದರು.