2024ರ ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್ ತಂಡವನ್ನು ದಾಖಲೆಯ ಗೆಲುವಿನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರೂ ಆಟಗಾರನಾಗಿ ಸೂರ್ಯಕುಮಾರ್ ಕಳೆದ ಕೆಲವು ಸಮಯದಲ್ಲಿ ಏರಿಳಿತಗಳನ್ನು ಕಂಡಿದ್ದರು. ಟಿ20 ವಿಶ್ವಕಪ್ಗೆ ಮುನ್ನ ಸುಮಾರು ಒಂದು ವರ್ಷ ರನ್ ಬರ ಎದುರಿಸಿದ್ದ ಅವರು, ವಿಶ್ವಕಪ್ ಸಮೀಪಿಸುತ್ತಿದ್ದಂತೆ ಮತ್ತೆ ಉತ್ತಮ ಫಾರ್ಮ್ ಕಂಡುಕೊಂಡರು.
ಸೂರ್ಯಕುಮಾರ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು.
ಇದರ ನಡುವೆ 35 ವರ್ಷದ ಸೂರ್ಯಕುಮಾರ್ ಯಾದವ್ ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಬಹುದು ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಆದರೆ ಫೈನಲ್ ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್, ನಿವೃತ್ತಿ ಕುರಿತು ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಸೂರ್ಯಕುಮಾರ್, “ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ನಿವೃತ್ತಿಯ ಬಗ್ಗೆ ಯಾಕೆ ಯೋಚಿಸಬೇಕು? ನಾನು ಇನ್ನೂ ನಿವೃತ್ತಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ,” ಎಂದು ಸ್ಪಷ್ಟಪಡಿಸಿದರು.
ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಯಾವುದೇ ರನ್ ಗಳಿಸದೆ ಔಟಾದರೂ, ಸಂಪೂರ್ಣ ಪಂದ್ಯಾವಳಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು. ಒಟ್ಟು ಒಂಬತ್ತು ಪಂದ್ಯಗಳಲ್ಲಿ 242 ರನ್ ಗಳಿಸಿದ ಸೂರ್ಯಕುಮಾರ್, 2026ರ ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದರಲ್ಲಿ ಆರಂಭಿಕ ಪಂದ್ಯದಲ್ಲಿನ ಅರ್ಧಶತಕವೂ ಸೇರಿದೆ.



