ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡ–ರೋಣ ತಾಲೂಕು ವ್ಯಾಪ್ತಿಯಲ್ಲಿ ವಿಂಡ್ ಹಾಗೂ ಸೋಲಾರ್ ಕಂಪನಿಗಳ ಭಾರಿ ವಾಹನಗಳ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ರೈತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಅಭಿವೃದ್ಧಿ ವೇದಿಕೆ ಆ.18ರಿಂದ ಗಜೇಂದ್ರಗಡದಲ್ಲಿ ವಿಂಡ್ ಕಂಪನಿಗಳ ವಾಹನಗಳನ್ನು ತಡೆದು ಅಹೋರಾತ್ರಿ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಮುಂದಾಗಿದೆ.
ಈ ಕುರಿತು ವೇದಿಕೆಯ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ವಿನಾಯಕ ಜರತಾರಿ ಮಾತನಾಡಿ, ಗಜೇಂದ್ರಗಡ–ರೋಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಹುರಾಷ್ಟ್ರೀಯ ಪವನ ವಿದ್ಯುತ್ ಕಂಪನಿಗಳು, ಸೋಲಾರ್ ಕಂಪನಿಗಳು ಹಾಗೂ ಆರ್ಎಂಸಿ ಕಾಂಕ್ರೀಟ್ ಘಟಕಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿದರು.
ವಿಂಡ್ ಕಂಪನಿಗಳ ಅತಿಭಾರದ ಹಾಗೂ ಅತಿಉದ್ದದ ವಾಹನಗಳು ಹಗಲು–ರಾತ್ರಿ ಗ್ರಾಮೀಣ ರಸ್ತೆಗಳ ಮೂಲಕ ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟು, ತಗ್ಗು–ಗುಂಡಿಗಳು ನಿರ್ಮಾಣವಾಗಿವೆ. ರೈತರು ಜಮೀನುಗಳಿಗೆ ತೆರಳುವುದಕ್ಕೂ, ಗ್ರಾಮಸ್ಥರು ನಿತ್ಯ ಸಂಚಾರ ನಡೆಸುವುದಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
CSR ಹಣದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆಗ್ರಹ
ವಿಂಡ್ ಕಂಪನಿಗಳ ವಾಹನ ಸಂಚಾರದಿಂದ ಹದಗೆಟ್ಟಿರುವ ಎಲ್ಲ ಗ್ರಾಮೀಣ ರಸ್ತೆಗಳನ್ನೂ ಕಂಪನಿಗಳ ಸಿಎಸ್ಆರ್ ನಿಧಿಯಲ್ಲಿ ದುರಸ್ತಿ ಹಾಗೂ ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಕ್ರಿಯಾ ಯೋಜನೆ ರೂಪಿಸಿ, ಅಂದಾಜು ವೆಚ್ಚ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ನಿಗದಿಪಡಿಸಬೇಕು. ಕಂಪನಿಗಳು ತಮ್ಮ ಲೆಟರ್ಹೆಡ್ನಲ್ಲಿ ಈ ವಿವರಗಳಿಗೆ ಸಹಿ ಹಾಗೂ ಮುದ್ರೆ ಹಾಕಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಜತೆಗೆ ಅದರ ಪ್ರತಿಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆ ಈಡೇರುವವರೆಗೆ ವಿಂಡ್ ಕಂಪನಿಗಳ ವಾಹನಗಳಿಗೆ ತಾಲೂಕು ವ್ಯಾಪ್ತಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಒಂದು ಲಕ್ಷ ಗಿಡ ನೆಡಲು ಬೇಡಿಕೆ
ವಿಂಡ್ ಕಂಪನಿಗಳ ಕಾಮಗಾರಿಯಿಂದ ಹಾನಿಗೊಳಗಾಗಿರುವ ಪರಿಸರವನ್ನು ಮರುಸ್ಥಾಪಿಸಬೇಕು. ಕಡಿದಿರುವ ಗಿಡಮರಗಳ ಬದಲಿಗೆ ಗಜೇಂದ್ರಗಡ–ರೋಣ ತಾಲೂಕುಗಳಲ್ಲಿ ಒಂದು ಲಕ್ಷ ಗಿಡಗಳನ್ನು ನೆಟ್ಟು, 10 ವರ್ಷಗಳ ಕಾಲ ಅವುಗಳ ಸಂರಕ್ಷಣೆ ಜವಾಬ್ದಾರಿಯನ್ನು ಕಂಪನಿಗಳೇ ವಹಿಸಬೇಕು ಎಂದು ಆಗ್ರಹಿಸಿದರು.
ಗಿಡಗಳ ರಕ್ಷಣೆ ಹಾಗೂ ಪೋಷಣೆಗಾಗಿ 100ಕ್ಕೂ ಹೆಚ್ಚು ಸ್ಥಳೀಯರನ್ನು 10 ವರ್ಷಗಳ ಅವಧಿಗೆ ನೇಮಿಸಿ, ಪ್ರತಿ ಕಾರ್ಮಿಕರಿಗೆ ತಿಂಗಳಿಗೆ ₹30 ಸಾವಿರ ವೇತನ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಹಳ್ಳ–ಕೊಳ್ಳ, ಚೆಕ್ಡ್ಯಾಂ ನಿರ್ಮಾಣಕ್ಕೂ ಒತ್ತಾಯ
ವಿಂಡ್ ಕಂಪನಿಗಳ ಕಾಮಗಾರಿಯಿಂದ ಹಾನಿಗೊಳಗಾಗಿರುವ ಹಳ್ಳ–ಕೊಳ್ಳ, ಸರುವೆ, ಕಿರುಹಳ್ಳ, ಒಳಗಟ್ಟಿ ಹಾಗೂ ಸೇತುವೆಗಳನ್ನು ಮರುನಿರ್ಮಿಸಬೇಕು. ತಾಲೂಕು ವ್ಯಾಪ್ತಿಯ ಅಗತ್ಯ ಸ್ಥಳಗಳಲ್ಲಿ ಚೆಕ್ಡ್ಯಾಂ ಹಾಗೂ ಸೇತುವೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಇದರ ಜತೆಗೆ ರೈತರ ಜಮೀನಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ನಿಂದ ರೋಣ–ಗಜೇಂದ್ರಗಡ ತಾಲೂಕಿನ ರೈತರ ಹೊಲ–ತೋಟಗಳಿಗೆ ನಿರಂತರವಾಗಿ ಉಚಿತ ತ್ರಿಫೇಸ್ ವಿದ್ಯುತ್ ನೀಡಬೇಕು. ರೈತರ ಜಮೀನಿನಲ್ಲಿ ಅಳವಡಿಸಿರುವ ವಿದ್ಯುತ್ ಘಟಕಗಳಿಂದ ರೈತರಿಗೆ ಶೇರ್ ನೀಡಬೇಕು ಎಂದು ಒತ್ತಾಯಿಸಿದರು.
ಅಗ್ರಿಮೆಂಟ್ ಕನ್ನಡದಲ್ಲೇ ಇರಲಿ
ವಿಂಡ್ ಕಂಪನಿಗಳಿಗೆ ಸಂಬಂಧಿಸಿದ ವ್ಯವಹಾರ ಹಾಗೂ ನೋಂದಣಿ ಪ್ರಕ್ರಿಯೆಗಳನ್ನು ಕನ್ನಡದಲ್ಲೇ ನಡೆಸಬೇಕು. ಈಗಾಗಲೇ ಮಾಡಿರುವ ಒಪ್ಪಂದಗಳ ಕನ್ನಡ ಪ್ರತಿಯನ್ನು ರೈತರಿಗೆ ನೀಡಬೇಕು. ಇದರಿಂದ ರೈತರಿಗೆ ಬಾಂಡ್ ಹಾಗೂ ಅಗ್ರಿಮೆಂಟ್ನಲ್ಲಿರುವ ಷರತ್ತುಗಳು ಸ್ಪಷ್ಟವಾಗಿ ತಿಳಿಯಲಿವೆ ಎಂದು ವಿನಾಯಕ ಜರತಾರಿ ಹೇಳಿದರು.
ಆ.18ರಿಂದ ಆರಂಭವಾಗಲಿರುವ ಹೋರಾಟದಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ವೇದಿಕೆ ತಿಳಿಸಿದೆ.
ಲಕ್ಷ್ಮಣ ಬಂಕದ, ಹೂವಾಜಿ ಚಂದೂಕರ, ನೀಲಪ್ಪ ಛಲವಾದಿ, ರಾಘು ಚವ್ಹಾಣ, ಪ್ರಕಾಶ ರಾಠೋಡ, ಚಂದ್ರು ಭೂಷಟ್ಟಿ, ಕುಬೇರ ನಾಯಕ, ಮುತ್ತು ರಾಠೋಡ, ಜೀವನಸಭಾ ಸರ್ಕಾವಾಸ, ಮುತ್ತು ಕಲಾಲ್, ಕುಮಾರ ನಂದಿಕೆಶ್ವರ, ವೀರೇಶ ಮಾಟಲದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ರೈತರ ಜಮೀನಿನಲ್ಲಿ ವಿದ್ಯುತ್ ಉತ್ಪಾದಿಸಿ ಕಂಪನಿಗಳು ಲಾಭ ಪಡೆಯುತ್ತಿವೆ. ಆದರೆ ಅದೇ ಭಾಗದ ರೈತರು ರಸ್ತೆ, ಪರಿಸರ, ನೀರು ಹಾಗೂ ವಿದ್ಯುತ್ ಸಮಸ್ಯೆ ಎದುರಿಸುವಂತಾಗಬಾರದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಆ.18ರಿಂದ ಅಹೋರಾತ್ರಿ ಹಾಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು.”
— ವಿನಾಯಕ ಜರತಾರಿ, ರಾಜ್ಯಾಧ್ಯಕ್ಷ, ಕರ್ನಾಟಕ ಅಭಿವೃದ್ಧಿ ವೇದಿಕೆ



