ವಿಜಯಸಾಕ್ಷಿ ಸುದ್ದಿ, ಗದಗ: ಅಂಧ, ಅನಾಥ ಮಕ್ಕಳಿಗೆ ತಂದೆಯಾಗಿ, ಪೋಷಕರಾಗಿ, ಸಂಗೀತದ ಗುರುವಾಗಿ, ಪುರಾಣ ಪ್ರವಚನಕ್ಕೆ ಪ್ರೇರಕರಾಗಿ, ದಿಕ್ಕಿಲ್ಲದ ಮಕ್ಕಳಿಗೆ ಬದುಕುವ ವಿದ್ಯೆ ನೀಡಿದ ಪಂಡಿತ ಪುಟ್ಟರಾಜ ಗವಾಯಿಗಳು ನೋಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದರು. ಅವರ ಸಾಹಿತ್ಯ ಕಣ್ಣಿದ್ದವರನ್ನೂ ಬೆರಗುಗೊಳಿಸಿತ್ತು ಎಂದು ಅನ್ನದಾನಿ ಹಿರೇಮಠ ಹೇಳಿದರು.
ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗದುಗಿನ ಕಲಾವಿಕಾಸ ಪರಿಷತ್ತಿನವರು ಏರ್ಪಡಿಸಿದ ಪಂಡಿತ ಪುಟ್ಟರಾಜ ಗವಾಯಿಗಳ 15ನೇ ಪುಣ್ಯಸ್ಮರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾವಹಿಸಿದ್ದ ವಿಭೂತಿ ಪತ್ರಿಕೆ ಸಂಪಾದಕ, ಹಿರಿಯ ಸಾಹಿತಿ ಅಂದಾನೆಪ್ಪ ವಿಭೂತಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಗದಗ-ಬೆಟಗೇರಿ ಜನರು ಜಾತ್ಯಾತೀತವಾಗಿ ಭಕ್ತಿಯಿಂದ ಅಂತಿಮ ನಮನದಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡರು.
ಚಿಕ್ಕಟ್ಟಿ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಅಧ್ಯಕ್ಷ ಫಕ್ಕೀರೇಶ್ವರ ಶಾಸ್ತ್ರಿಗಳು ಹಿರೇಮಠ ಸ್ವಾಗತಿಸಿದರು. ಕಲಾವಿಕಾಸ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಪಂ. ಸಿ.ಕೆ.ಹೆಚ್. ಶಾಸ್ತ್ರಿಗಳು (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ, ಸಾಹಿತಿ ಶ್ರೀಶೈಲ ಬಡಿಗೇರ ಪುಟ್ಟರಾಜ ಗುರುಗಳ ಕುರಿತು ಸ್ವರಚಿತ ಕವನಗಳನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಜೆ.ಪಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಿಬಿಎ ಕಾಲೇಜಿನ ಪ್ರಾಚಾರ್ಯ ಬಿಪಿನ್ ಚಿಕ್ಕಟ್ಟಿ, ಪ್ರಾ. ಶೋಭಾ ಸ್ಥಾವರಮಠ, ಪ್ರಾ. ರಿಯಾನಾ ಮುಲ್ಲಾ ಇದ್ದರು. ಶಿಕ್ಷಕಿ ರಜನಿ ಕುರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣೇಶ ಬಡ್ನಿ ವಂದಿಸಿದರು. ಸಿ.ಕೆ.ಹೆಚ್. ಶಾಸ್ತ್ರಿಯವರು ರಚಿಸಿದ ಪುಟ್ಟರಾಜ ಗುರುಗಳ ಗೀತೆಗಳ ಪ್ರದರ್ಶನ ಜರುಗಿತು.
ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಎಸ್.ವಾಯ್. ಚಿಕ್ಕಟ್ಟಿ ಮಾತನಾಡಿ, ಪುಟ್ಟರಾಜ ಗವಾಯಿಗಳೊಂದಿಗಿನ ಒಡನಾಟವನ್ನು ನೆನಪಿಸಿಕೊಳ್ಳುವುದರ ಜೊತೆಗೆ ಕಲಾವಿಕಾಸ ಪರಿಷತ್‌ನ ಸಿ.ಕೆ.ಹೆಚ್. ಶಾಸ್ತ್ರಿಯವರು 15 ವರ್ಷಗಳಿಂದ ಪೂಜ್ಯರ ಪುಣ್ಯಸ್ಮರಣೆಯನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸುತ್ತಿರುವುದು ನಮ್ಮ ಸಂಸ್ಥೆಯ ಭಾಗ್ಯವಿಶೇಷವೆಂದು ಹೇಳಿದರು.


