ವಿಜಯಸಾಕ್ಷಿ ಸುದ್ದಿ, ಗದಗ: ಅಂಧರ ಸಂಗೀತದ ಧ್ವನಿಯಲ್ಲಿ ಪುಟ್ಟಯ್ಯಜ್ಜನವರು ಇನ್ನೂ ಜೀವಂತವಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಜಗದಲ್ಲಿ ಸಂತ-ಶರಣರನ್ನು ಸ್ಮರಿಸುವುದರ ಜೊತೆಗೆ ಅವರ ಸಾಕ್ಷಾತ್ ಸನ್ಮಾರ್ಗಗಳನ್ನು ಅನುಸರಿಸಲು ನಿದರ್ಶನವಾಗಿವೆ ಎಂದು ಪ. ಪೂ. ವೀರೇಶ್ವರ ಶಿವಯೋಗಿಗಳು ನುಡಿದರು.
ಡಾ. ವ್ಹಿ. ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ಹಾಗೂ ಅಶ್ವಿನಿ ಪ್ರಕಾಶನ ಗದಗ ಇವರ ಆಶ್ರಯದಲ್ಲಿ ಜರುಗಿದ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ 111ನೇ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಪಂಡಿತ ರಾಜಗುರು ಕಲಕೇರಿ, ಧರ್ಮ- ಸಂಸ್ಕೃತಿಗಳ ಮಾನವನನ್ನು ಸುಸಂಸ್ಕೃತರನ್ನಾಗಿಸುತ್ತವೆ. ಧರ್ಮ ಮರೆತರೆ, ಸಂಸ್ಕೃತಿ ಮರೆತರೆ ಇಂತಹ ಕಾರ್ಯಕ್ರಮಗಳಿಗೆ ಬೆಲೆ ಸಿಗಲಾರದು ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಎಸ್.ಎನ್. ವೆಂಕಟಾಪೂರ, ಸಹೋದರತೆ, ಸ್ನೇಹತ್ವದಲ್ಲಿ ಡಾ. ವ್ಹಿ.ಬಿ. ಹಿರೇಮಠರವರನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಬರೀ ಮನೆಯಲ್ಲ, ಸಾಹಿತ್ಯದ ಮಹಾಮನೆ ಎಂದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಭೃಂಗಿಮಠ, ಕೆ.ಎಚ್. ಬೇಲೂರ, ಡಾ. ರಶ್ಮಿ ಅಂಗಡಿ ಪಾಲ್ಗೊಂಡಿದ್ದರು.
20 ಜನ ಸಾಹಿತಿ, ಕಲಾವಿದ ಸಾಧಕರಿಗೆ ಶ್ರೀ ಗುರುಪುಟ್ಟರಾಜ ಗವಾಯಿಗಳ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 16 ಜನ ಕವಿಗಳು ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನವಾಚನ ಮಾಡಿದರು. ಡಾ. ಹೇಮಲತಾ ಹಿರೇಮಠ ದಂಪತಿ ಜೆ.ಸಿ. ಜಂಪಣ್ಣವರ, ಪ್ರಸಾದ ಸೇವೆ ನೀಡಿದ ಶ್ರೀ ಶಿವಕುಮಾರ ದೇವದುರ್ಗಮಠರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾಯಲಿನ್ ಮತ್ತು ಶಹನಾಯ್ ವಾದಕರಾದ ವಿರೇಶ್ವರ ಪುಣ್ಯಾಶ್ರಮದ ಶ್ರೀ ನಾರಾಯಣಪ್ಪ ವಿ.ಹಿರೇಕೊಳಚಿ ಇವರಿಂದ ಸಂಗೀತ ಸೇವೆ ಜರುಗಿತು. ವೀರಯ್ಯ ಹೊಸಮಠ ಪ್ರಾರ್ಥಿಸಿದರು. ಸುಷ್ಮಾ ಹಿರೇಮಠ ಸ್ವಾಗತಿಸಿದರು. ವಡ್ಡಿನ ನಿರೂಪಿಸಿದರು. ವ್ಹಿ.ವ್ಹಿ. ಹಿರೇಮಠ ವಂದಿಸಿದ್ದರು. ಚಿದಾನಂದ ಸಾಲಿಮಠ, ಎಂ.ಎಂ. ಶಿರೋಳಮಠ, ಪ್ರಶಾಂತ ದೊಡ್ಡಮನಿ, ಪುಟ್ಟರಾಜ ಹಿರೇಮಠ, ರಮೇಶ ಹತ್ತಿಕಾಳ, ಬಸಮ್ಮ ಹರ್ತಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮುದ್ರಣಕಾಶಿ ಗದಗನಲ್ಲಿ ಪ್ರಪ್ರಥಮವಾಗಿ ಪ. ಪೂ. ಡಾ. ವಿರೇಶ್ವರ ಶಿವಯೋಗಿಗಳಿಗೆ ಗ್ರಂಥ ತುಲಾಭಾರ ಅಶ್ವಿನಿ ಪ್ರಕಾಶನದ ವತಿಯಿಂದ ನೆರವೇರಿತು. ಸಾಹಿತಿ, ಲೈನ್‌ಮ್ಯಾನ್ ಮಹೇಶ ವಡ್ಡಿನರವರ ಪುತ್ರ ಪುಟ್ಟರಾಜ ವಡ್ಡಿನ 2ನೇ ವರ್ಷದ ಹುಟ್ಟುಹಬ್ಬದ ಆಚರಣೆ ಶ್ರೀಗಳ ಆಶೀರ್ವಾದದೊಂದಿಗೆ ಜರುಗಿತು.