
ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣವು ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲದು. ಅನುಭವವು ನಮ್ಮ ಬದುಕನ್ನು ಹದಗೊಳಿಸಿದರೆ ಶಿಕ್ಷಣವು ಹದವಾದ ಬದುಕಿಗೆ ಅರ್ಥ ನೀಡುವುದು. ಮಗುವೊಂದು ಬೆಳೆದು ಸತ್ಪ್ರಜೆಯಾಗಲು ಉತ್ತಮ ಶಿಕ್ಷಣ ಬೇಕು. ಇಂತಹ ಶಿಕ್ಷಣ ನೀಡುವ ಶಿಕ್ಷಕರ ಸೇವೆ ಅನುಪಮವಾದದ್ದು ಎಂದು ನಿವೃತ್ತ ಉಪನ್ಯಾಸಕರು, ಗದಗ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಹೇಳಿದರು.
ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ‘ಗುರುವಂದನೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಕರು ಸುಂದರ ಸಮಾಜದ ನಿರ್ಮಾತೃಗಳಾಗಿದ್ದು, ಶಿಕ್ಷಕ ವೃತ್ತಿಯು ಬರೀ ಜೀವನ ವೃತ್ತಿಯಲ್ಲ. ಸಮಾಜದಲ್ಲಿ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸಬಲ್ಲ ಜವಾಬ್ದಾರಿಯುಳ್ಳವರು. ಇಂತಹ ಜವಾಬ್ದಾರಿ ಹೊರಲು ವಿಸ್ತೃತವಾದ ಜ್ಞಾನದ ಭಂಡಾರ, ಸಂಯಮ, ಅಂತರ್ಯದಲ್ಲಿ ಯತಿಯಂತಹ ಭಾವಗಳು, ದೂರದೃಷ್ಟಿಯಂತಹ ಮಹತ್ವದ ಅಂಶಗಳನ್ನು ಹೊಂದಿರಬೇಕು ಎಂದರು.
ಗದುಗಿನ ಕಾಶೀ ವೈದಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಗುರುಸಿದ್ಧಯ್ಯ ಹಿರೇಮಠ ಮಾತನಾಡಿ, ಬೋಧನೆ ಒಂದು ಸಂಕೀರ್ಣ ಕೌಶಲ. ಇದು ಒಂದು ನಿರ್ದಿಷ್ಟವಾದ, ಉದ್ದೇಶಪೂರ್ವಕವಾದ ಹಾಗೂ ಪ್ರಜ್ಞಾಪೂರ್ವಕವಾದ ಕ್ರಿಯೆ. ಶಿಕ್ಷಕರ ವೃತ್ತಿ ಜೀವನವು ಆರಂಭದಿಂದ ಅಂತ್ಯದವರೆಗೂ ತನ್ನರಿವೇ ತನಗೆ ಗುರು ಎಂಬಂತೆ ಸಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕ ಜೀವನವು ಪವಿತ್ರವಾದದ್ದು. ಮಕ್ಕಳಲ್ಲಿ ಅಕ್ಷರದ ಅರಿವು ಮೂಡಿಸಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ ಜೀವನದ ಪಥದಲ್ಲಿ ಯಶಸ್ಸು ಸಾಧಿಸುವಂತೆ ಮಾಡುವುದಾಗಿದೆ ಎಂದರು.
ವೀಣಾ ಬೇಲಿ ಪ್ರಾರ್ಥಿಸಿದರು, ಸುಮಾ ಪಾಟೀಲ ಸ್ವಾಗತಿಸಿದರು. ಸುಶೀಲಾ ಕೋಟಿ ನಿರೂಪಿಸಿದರು. ಸುಧಾ ಬೆನಕಲ್ಲ ಪರಿಚಯಿಸಿದರು. ಸುಮತಿ ಗದಗಿನಮಠ ವಂದಿಸಿದರು.

