ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಮಿಶನ್ ವಿದ್ಯಾಕಾಶಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳ ಮೂಲಕ 10ನೇ ವರ್ಗದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ, ಪಾಲಕರ, ಶಿಕ್ಷಕರ ಪ್ರಯತ್ನದಿಂದಾಗಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಓದುತ್ತಿದ್ದಾರೆ. ಇದು ನಮಗೆಲ್ಲ ಹೆಮ್ಮೆ ಮೂಡಿಸಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಮಂಗಳವಾರ ಮಧ್ಯಾಹ್ನ ಕುಂದಗೋಳ ಪಟ್ಟಣದ ಸನ್‌ಶೈನ್ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತು ವಿವಿಧ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ, ಎಸ್.ಡಿ.ಎಂ.ಸಿ. ಅಧ್ಯಕ್ಷರ, ಪಾಲಕರ ಸಭೆ ಮತ್ತು 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿಸಿ ಮಾತನಾಡಿದರು.
ಮಕ್ಕಳಲ್ಲಿ ಓದುವ ಅಭಿರುಚಿ ಮೂಡಿಸಬೇಕು. ಅವರಲ್ಲಿನ ಉತ್ತಮ ಆಸಕ್ತಿಗಳನ್ನು ಪ್ರೋತ್ಸಾಹಿಸಬೇಕು. ಪಾಲಕರಿಗೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಅಭಿರುಚಿ ಬೆಳೆಸುವ ಜವಾಬ್ದರಿ ಇದೆ. ಮಕ್ಕಳ ಯಶಸ್ಸು ನಮ್ಮೆಲ್ಲರ ಪ್ರಯತ್ನದಲ್ಲಿದೆ. ಜಿಲ್ಲೆಯ ಎಲ್ಲ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ರಾಜ್ಯಕ್ಕೆ ರ‍್ಯಾಂಕ್ ಬರಬೇಕು. ಈ ನಿಟ್ಟಿನಲ್ಲಿ ಮಿಶನ್ ವಿದ್ಯಾಕಾಶಿ ಕಳೆದ ಹತ್ತು ತಿಂಗಳಿಂದ ನಿರಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಭರವಸೆ ಕಂಡಿದೆ ಎಂದರು.
ಸಭೆಯಲ್ಲಿ ಶಾಲಾ ಫಲಿತಾಂಶ ಸುಧಾರಣೆ ಮತ್ತು ಮಕ್ಕಳ ದಾಖಲಾತಿ ಪ್ರಗತಿ ಕುರಿತು ಯರಗುಪ್ಪಿ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಫ್.ವಿ. ಮಂಜಣ್ಣವರ, ಸಂಶಿ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಿ.ಎಚ್. ಪಾಳೇದ, ಮಳಲಿ ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ನೆಹರು ಪಾಟೀಲ, ಕಮಡೊಳ್ಳಿ ಪ್ರೌಢಶಾಲೆ ಪಾಲಕರ ಸಮಿತಿಯ ಮಲ್ಲಿಕಾರ್ಜುನ ಪಾಟೀಲ, ಶಿಕ್ಷಕಿ ಎಫ್.ಸಿ. ದಂಡಿನ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಸ್ನೇಹಾ ಮೇಟಿ, ಜರೀನಾ ದರೂಬಾಯಿ, ಶ್ರೀ ಸದ್ಗುರು ಶಿವಾನಂದ ಬಾಲಿಕಾ ಪ್ರೌಢಶಾಲೆಯ ಪ್ರತಿಭಾ ಕುಸುಗಲ್ಲ, ಗುರುದೇವ ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆಯ ಆದಿತ್ಯಾ, ಸನ್‌ಶೈನ್ ಪ್ರೌಢಶಾಲೆಯ ಆರತಿ ಕಂಪ್ಲಿಕೊಪ್ಪ, ಸಂಶಿ ಸರಕಾರಿ ಪ್ರೌಢಶಾಲೆಯ ಅಂಜಲಿ ಕೊಬ್ಬಯ್ಯನವರ, ಆರ್.ಎಂ.ಎಸ್.ಎ ಪ್ರೌಢಶಾಲೆಯ ಅಪೂರ್ವಾ ಚಂದ್ರಶೇಖರ ದಿವಟಗಿ ಮಾತನಾಡಿ, ತಮ್ನ ಅಭಿಪ್ರಾಯಗಳನ್ನು ಹಂಚಿಕೊAಡು, ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಭೀಮಣ್ಣ ಸಾವಳಗಿ ಕಾರ್ಯಕ್ರಮ ನಿರೂಪಿಸಿದರು. ಸನ್‌ಶೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಎಂ. ಬಡಿಗೇರ ವಂದಿಸಿದರು.
ಕಳೆದ ಒಂದು ತಿಂಗಳಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಅಲ್ಲಿನ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಮಿಶನ್ ವಿದ್ಯಾಕಾಶಿ ಯೋಜನೆಯಡಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿನ ಓದುವ-ಬರೆಯುವಲ್ಲಿ ಆಗಿರುವ ಬದಲಾವಣೆ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ಆಗಿರುವ ಶೈಕ್ಷಣಿಕ ಬದಲಾವಣೆ, ಸಾಧಿಸುವ ಛಲ ನೋಡಿ ನಮ್ಮ ಕಾರ್ಯದಲ್ಲಿನ ವಿಶ್ವಾಸ ಹೆಚ್ಚಿದೆ. ವಿದ್ಯಾರ್ಥಿಗಳ ಮಾತು, ಅವರ ಆತ್ಮವಿಶ್ವಾಸ ಕೇಳಿ ಸಂತಸವಾಗಿದೆ ಎಂದು ಡಿಸಿ ದಿವ್ಯ ಪ್ರಭು ತಿಳಿಸಿದರು.