ಬೆಂಗಳೂರು: ನಾಯಂಡಹಳ್ಳಿ ಬಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ಯುವಕನನ್ನು ಗುಣ (28) ಎಂದು ಗುರುತಿಸಲಾಗಿದ್ದು, ಆತನ ಸ್ನೇಹಿತ ವಿನೋದ್ ಕೊಲೆ ಆರೋಪಿಯಾಗಿದ್ದಾನೆ. ಘಟನೆಯಲ್ಲಿ ವೇಲು ಎಂಬ ಇನ್ನೊಬ್ಬ ಯುವಕನಿಗೆ ಚಾಕು ಇರಿತದಿಂದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ಗುಣ, ವೇಲು ಹಾಗೂ ವಿನೋದ್ ನಡುವೆ ಜಗಳ ನಡೆದಿತ್ತು. ಇದೇ ದ್ವೇಷದ ಹಿನ್ನೆಲೆ ಬೈಕ್‌ನಲ್ಲಿ ಬರುತ್ತಿದ್ದ ಗುಣ ಮತ್ತು ವೇಲು ಅವರನ್ನು ವಿನೋದ್ ಅಡ್ಡಗಟ್ಟಿ, ಮಾತಿನ ಚಕಮಕಿ ತೀವ್ರಗೊಂಡು ಇಬ್ಬರಿಗೂ ಚಾಕು ಇರಿಸಿದ್ದಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಗುಣ ಸ್ಥಳದಲ್ಲೇ ಸಾವನ್ನಪ್ಪಿದ್ದು, ವೇಲು ಜೀವಾಪಾಯದಿಂದ ಪಾರಾಗಿದ್ದಾನೆ. ಇನ್ನು, ಈ ಮೂವರೂ ಹಿಂದೆಯೇ ಒಂದು ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿ ಬ್ಯಾಟರಾಯನಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ವಿನೋದ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.



