ವಿಜಯಸಾಕ್ಷಿ ಸುದ್ದಿ, ಗದಗ: ಗುಜರಾತ್‌ನಿಂದ ಜರ್ಮನಿಯವರೆಗೆ ಎಲ್ಲೆಡೆ ಮಹಾತ್ಮ ಗಾಂಧಿ ಪ್ರತಿಮೆ ಇದೆ. ಆದರೆ ಬಿಜೆಪಿಯವರಿಗೆ ಗೋಡ್ಸೆ ಬೇಕು, ವೀರ ಸಾವರ್ಕರ್ ಬೇಕು. ಮತ್ತೆ, ಗಾಂಧೀಜಿ ದೇಶದ್ರೋಹಿಯೇ? ಗಾಂಧೀಜಿ ಅವರಿಗೆ ಮಹಾತ್ಮ ಬಿರುದು ಕೊಟ್ಟವರು ಯಾರು ಎನ್ನುವುದು ಗೊತ್ತಿದೆ. ಸುಭಾಶ್ಚಂದ್ರ ಬೋಸ್ ಅವರಿಗೆ ನೇತಾಜಿ ಬಿರುದು ಯಾರು ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಸಾವರ್ವಕರ್ ಅವರಿಗೆ ವೀರ ಎಂಬ ಬಿರುದು ಕೊಟ್ಟವರು ಯಾರು ಎಂದು ಪ್ರಶ್ನಿಸಿದರೆ, ದೇಶದ್ರೋಹಿ ಎಂಬ ಪಟ್ಟ ಕಟ್ಟುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಗದಗ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ‘ಯುವಧ್ವನಿ’ ಉದ್ಘಾಟಿಸಿ ಅವರು ಮಾತನಾಡಿ, 2014ರಿಂದ ಈಚೆಗೆ ಆರ್‌ಎಸ್‌ಎಸ್, ವೀರ ಸಾವರ್ಕರ್ ಬಗ್ಗೆ ಪ್ರಶ್ನಿಸಿದರೆ ದೇಶದ್ರೋಹಿ ಎನ್ನುವ ಹಣೆಪಟ್ಟಿ ಕಟ್ಟಲಾಗುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸದ ಸಂಘಟನೆಗಳು ಇವತ್ತು ದೇಶಭಕ್ತಿಯ ಸರ್ಟಿಫಿಕೇಟ್ ಕೊಡುವಂತಾಗಿದೆ ಎಂದು ಆರೋಪಿಸಿದರು.
ಸಾವರ್ಕರ್ ತಮಗೆ ತಾವೇ ವೀರ ಎನ್ನುವ ಬಿರುದು ಕೊಟ್ಟುಕೊಂಡಿದ್ದಾರೆ. ಬ್ರಿಟಿಷರಿಂದ 60 ರೂ ಪಿಂಚಣಿ ಪಡೆದವರು, ಮುಸ್ಲಿಂರಿಗೆ ಪ್ರತ್ಯೇಕ ದೇಶ ಬೇಕು ಎಂದು ಮೊದಲು ಘೋಷಣೆ ಮಾಡಿದ್ದು ಸಾವರ್ಕರ್. ಅಂಡಮಾನ್ ಜೈಲಿನಲ್ಲಿದ್ದ 80 ಸಾವಿರ ಜನರ ಪೈಕಿ ಮೂವರು ಮಾತ್ರ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಗೆ ವಿನಂತಿಸಿದರು. ಆ ಮೂವರಲ್ಲಿ ಸಾವರ್ಕರ್ ಮೊದಲಿಗರಾಗಿದ್ದು, ಆರು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಅಂಥವರನ್ನು ಬಿಜೆಪಿ ಹೊತ್ತು ಮೆರೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ಇಂದಿರಾ ಗಾಂಧಿ ಕಾಲದಲ್ಲಿ 20 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿ ಬಡತನ ನಿರ್ಮೂಲನೆಗೆ ನಾಂದಿ ಹಾಡಿದರು. ಸಿದ್ದರಾಮಯ್ಯ ಯುವಕರಿಗಾಗಿ ಯುವನಿಧಿ ಯೋಜನೆ ಸಹಿತ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರನ್ನು ಬಡತನ ರೇಖೆಗಿಂತ ಮೇಲಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ರಾಜಕಾರಣದಲ್ಲಿ ಮಹಾತ್ಮ ಗಾಂಧೀಜಿ ಅವರ ಆಶಯದಂತೆ ನಡೆಯುತ್ತಿರುವ ದೇಶದ ಏಕೈಕ ಪಕ್ಷ ಕಾಂಗ್ರೆಸ್. ಇಂಥ ಪಕ್ಷದ ಯುವ ಕಾರ್ಯಕರ್ತರು ಸೇವಾ ಮನೋಭಾವದಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವಂತಾಗಲಿ ಎಂದು ಆಶಿಸಿದರು.
ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ರೋಣ ಶಾಸಕ ಜಿ.ಎಸ್. ಪಾಟೀಲ, ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಣ್ಣ ಲಮಾಣಿ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥಗೌಡ, ದೀಪಿಕಾ ರೆಡ್ಡಿ, ಎಂ.ಡಿ. ಸೌದಾಗರ್, ಮೋಹನ ಅಸುಂಡಿ, ಮುಖಂಡರಾದ ಎ.ಎಂ. ಹಿಂಡಸಗೇರಿ, ಐ.ಎಸ್. ಪಾಟೀಲ, ಸುಜಾತಾ ದೊಡ್ಡಮನಿ, ಅಕ್ಬರಸಾಬ್ ಬಬರ್ಚಿ, ವಾಸಣ್ಣ ಕುರುಡಗಿ, ಸಚಿನ್ ಪಾಟೀಲ, ವಿವೇಕ ಯಾವಗಲ್, ಪೀರಸಾಬ ಕೌತಾಳ, ಮಿಥುನ್ ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಕೃಷ್ಣಾ ಪರಾಪುರ, ಶಕುಂತಲಾ ಅಕ್ಕಿ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳಿಗೆ ಶಾಸಕ ಜಿ.ಎಸ್. ಪಾಟೀಲ ಪ್ರಮಾಣವಚನ ಬೋಧಿಸಿದರು. ಸಲೀಂ ಅಹ್ಮದ್ `ಯುವ ಸಂಕಲ್ಪ’ ಆ್ಯಪ್ ಬಿಡುಗಡೆಗೊಳಿಸಿದರು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಸ್ವಾಗತಿಸಿದರು. ಯುವ ಘಟಕದ ನೂತನ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಮ್ಮ ವಿರೋಧ ಪಕ್ಷಗಳು ಜನರನ್ನು ವಿಭಜಿಸಿ, ಜಾತಿ-ಧರ್ಮದ ಮೇಲೆ ಚುನಾವಣೆಯನ್ನು ಗೆಲ್ಲಬಹುದು ಎಂದುಕೊಂಡಿದ್ದರೆ, ಹಾಗೆ ಮಾಡಲು ನಾವು ಬಿಡುವುದಿಲ್ಲ. ನಾವು ಸೇವೆ ಹಾಗೂ ರಾಷ್ಟ್ರ ಕಟ್ಟುವ ಕೆಲಸದ ಮೂಲಕ ಭ್ರಾತೃತ್ವ ಭಾವನೆ ಬೆಳೆಸಿ, ಸಮಾಜವನ್ನು ಗಟ್ಟಿಯಾಗಿ ಕಟ್ಟುವುದರ ಮೂಲಕ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಲು ದುಡಿಯಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.
“ನರೇಂದ್ರ ಮೋದಿ ನೇತೃತ್ವದ ಸರಕಾರ ಕಳೆದ 11 ವರ್ಷಗಳಿಂದ ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಹಿಂದಿನ ಸರಕಾರದ ಯೋಜನೆಗಳಿಗೆ ಹೊಸ ಹೆಸರು ಕೊಡುವ ಕೆಲಸವನ್ನಷ್ಟೇ ಮೋದಿ ಮಾಡಿದ್ದಾರೆ. ಯುವಕರು ಈ ಬಗ್ಗೆ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ವಿಷಯಗಳನ್ನು ಪರಾಮರ್ಶಿಸುವ ಕೆಲಸ ಮಾಡಬೇಕು”
– ಪ್ರಿಯಾಂಕ್ ಖರ್ಗೆ.
ಗ್ರಾಮೀಣಾಭಿವೃದ್ಧಿ ಸಚಿವರು.