Homehubballiಜಿಲ್ಲಾಡಳಿತದಿಂದ ತ್ವರಿತ ಪರಿಹಾರ ಕಾರ್ಯ

ಜಿಲ್ಲಾಡಳಿತದಿಂದ ತ್ವರಿತ ಪರಿಹಾರ ಕಾರ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದೆ. ಅಣ್ಣಿಗೇರಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ 130 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಿಯಾದ ಮನೆಗಳಿಗೆ ಎಸ್.ಡಿ.ಆರ್.ಎಫ್ ನಿಯಮಾವಳಿಗಳ ಅನುಸಾರ ಪರಿಶೀಲಿಸಿ, ಪರಿಹಾರವನ್ನು ನೀಡಲಾಗುತ್ತದೆ. ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಹೆಚ್ಚಾಗಿ ಮಳೆ ಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗರೂಕರಾಗಬೇಕಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಹೇಳಿದರು.

ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಟ್ಟಿ ಹಳ್ಳ ದಾಟುವಾಗ ಮಳೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಟ್ರಾಕ್ಟರ್ ಉರುಳಿ ಬಿದ್ದಿದೆ. ಪರಿಣಾಮವಾಗಿ ಶಿವಯ್ಯ ಬಸಯ್ಯ ವಟ್ನಾಳಮಠ ಅವರು ನಿಧನರಾಗಿದ್ದಾರೆ. ಶಾಸಕರು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ ರೂ.5 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಬಯಲು ಸೀಮೆ ಪ್ರದೇಶದಲ್ಲಿನ ಹಳ್ಳಗಳಿಗೆ ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ. ಹಳ್ಳಗಳು, ನಾಲಾಗಳ ಮೇಲೆ ಬಳ್ಳಿಗಳು ಬೆಳೆದು ನೀರು ಸೇತುವೆ ಮೇಲೆ ಹರಿಯುತ್ತದೆ. ಹೀಗಾಗಿ ಬೆಣ್ಣೆಹಳ್ಳ, ತುಪ್ಪರಿ ಹಳ್ಳಗಳು ಸಹ ಹೊಲಗಳಲ್ಲಿ ಹರಿದು ಹೋಗುತ್ತವೆ. ಈ ಭಾಗದ ರೈತರಿಗೆ ಸಾಕಷ್ಟು ಅನಾನುಕೂಲ ಆಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗುತ್ತಿದೆ. ಸರ್ಕಾರದಿಂದ ಪರಿಹಾರ ಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

ಹುಬ್ಬಳ್ಳಿಯ ನೇಕಾರ ನಗರದಲ್ಲಿ ಹುಸೇನಸಾಬ್ ಎಂಬುವವರು ನೀರಿನಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ ಇದೆ. ಅವರ ಪತ್ತೆಗೆ ಪೊಲೀಸ್, ಅಗ್ನಿಶಾಮಕ, ಎಸ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಘಟನಾ ಸ್ಥಳ ಸಮೀಪದ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಟ್ಟಿಹಳ್ಳದ ಟ್ರ‍್ಯಾಕ್ಟರ್ ದುರಂತದಲ್ಲಿ ಸಿಲುಕಿ ಗಾಯಗೊಂಡಿದ್ದ ವಾಸು ಶಿವಪ್ಪ ಹೈಬತಿ ಅವರ ಆರೋಗ್ಯವನ್ನು ಸಚಿವರು ವಿಚಾರಿಸಿದರು. ಗಾಯಾಳುವಿಗೆ ಸ್ವತಃ ರೂ. 20 ಸಾವಿರ ಹಣವನ್ನು ವಿತರಿಸಿದರು. ಅಲ್ಲದೇ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿವೈಎಸ್ಪಿ ವಿನೋದ ಮುಕ್ತೆದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಕುಂದಗೋಳ ತಹಸೀಲ್ದಾರ ರಾಜು ಮಾವರಕರ, ಡಿಎಚ್‌ಓ ಡಾ. ಹೋನಕೇರಿ, ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ಕುಂದಗೋಳ ತಾಲೂಕು ವೈದ್ಯಾಧಿಕಾರಿ ಡಾ. ಸೋಫಿಯಾ, ಸಿಪಿಐ ನವೀನ ಜಕಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವರು ಕುಂದಗೋಳ ತಾಲೂಕು ಆಸ್ಪತ್ರೆ, ಹಂಚಿನಾಳ ಮತ್ತು ದೇವನೂರ ಮಧ್ಯೆ ಬರುವ ಕಟ್ಟಿ ಹಳ್ಳದ ವೀಕ್ಷಣೆ, ದೇವನೂರ ಮತ್ತು ಕಮಡೊಳ್ಳಿ ಮಧ್ಯೆ ಬರುವ ಬೆಣ್ಣೆ ಹಳ್ಳ ಮತ್ತು ಬೆಳೆ ಹಾನಿ ವೀಕ್ಷಣೆ, ಹಿರೇನರ್ತಿ ಗ್ರಾಮದ ರಸ್ತೆ ಹಾಗೂ ಸರಕಾರಿ ಪ್ರೌಢಶಾಲೆ ವೀಕ್ಷಣೆ ಹಾಗೂ ಮುಳ್ಕೊಳ್ಳಿ ಗ್ರಾಮದ ರಸ್ತೆ ಹಾಗೂ ಬೆಳೆ ಹಾನಿ ವೀಕ್ಷಣೆ ಮಾಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!