ಬೆಂಗಳೂರು:- ಹಿಂದೂಗಳನ್ನು ಒಡೆಯವುದು ಕಾಂಗ್ರೆಸ್ ಅಜೆಂಡಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಿಗೆ ಸ್ಪಷ್ಟತೆಯೇ ಇಲ್ಲ. ಜಾತಿ ತೆಗೆದಿದ್ದೇವೆ ಅಂತಾರೆ, ಕೆಲವು ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ. ತೆಗೆದಿರುವ ಜಾತಿಗಳ ಹೆಸರು ಹೇಳಿದರೂ ಬರೆದುಕೊಳ್ಳುತ್ತೇವೆ ಎಂದಿದ್ದಾರೆ. ಈ ಗೊಂದಲ ಯಾಕೆ ಮೂಡಿಸಬೇಕು. ವಿವಿಧ ಜಾತಿ ಸಮುದಾಯಗಳಿಗೆ ಸಮೀಕ್ಷೆಯಿಂದ ಅಪಮಾನ ಅಗುತ್ತಿದೆ ಎಂದು ದೂರಿದರು.
ಸಚಿವರಿಗೆ ಗೌರವ ಇದ್ದರೆ ಸಂಪುಟ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಬೇಕು. ಸಮುದಾಯಗಳು ಕಾಂಗ್ರೆಸ್ ಸಚಿವರು, ಶಾಸಕರನ್ನು ಕ್ಷಮಿಸುವುದಿಲ್ಲ. ಈ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ ಎಂದು ದೂರಿದರು.
ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ, ಅವಹೇಳನ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು ತಂದಿದ್ದಾರೆ. ಹೊಸ ಜಾತಿಯನ್ನು ಸೃಷ್ಟಿಸಿದ್ದು ಹೇಗೆ? ಸಿದ್ದರಾಮಯ್ಯನವರಿಗೆ ಅಧಿಕಾರ ಹೋಗುವ ಆತಂಕ ಇರುವ ಕಾರಣ ಸೋನಿಯಾ ಗಾಂಧಿಯವರನ್ನು ಓಲೈಸಲು ಕ್ರಿಶ್ಚಿಯನ್ ಹೆಸರು ತಳುಕು ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.