ರಾಮನಗರ:- ಭೂಸ್ವಾಧೀನ ಕ್ರಮವನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ ಮಾಡಿದ್ದಾರೆ.
ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ ಭೂ ಸ್ವಾಧೀನ ಮಾಡುತ್ತಿರುವುದು ಅಕ್ರಮವಾಗಿದೆ. ಇದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು. ಗ್ರೇಟರ್ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಬಿಡದಿ, ಬೈರಮಂಗಲ ಮತ್ತು ಕಂಚುಗಾರನಹಳ್ಳಿಯಲ್ಲಿ 9,600 ಎಕರೆ ಜಮೀನನ್ನು ಸ್ವಾಧೀನ ಮಾಡುತ್ತಿದೆ. ಈ ಪೈಕಿ 6,500 ಎಕರೆ ಕೃಷಿಭೂಮಿ ಇದೆ. ಇಲ್ಲಿ 10 ಲಕ್ಷಕ್ಕೂ ಅಧಿಕ ತೆಂಗು ಹಾಗೂ ಮಾವಿನ ಮರಗಳಿವೆ. ಪ್ರತಿ ದಿನ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿ ಕೆಎಂಎಫ್‌ಗೆ ತಲುಪುತ್ತಿದೆ. 3 ಸಾವಿರಕ್ಕೂ ಅಧಿಕ ರೈತರು ಹಾಗೂ ಕಾರ್ಮಿಕರು ಕೃಷಿಯನ್ನು ನಂಬಿಕೊಂಡಿದ್ದಾರೆ. ಇಷ್ಟು ಫಲವತ್ತಾದ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ಸೈಟುಗಳನ್ನು ನೀಡಲಾಗುತ್ತಿದೆ ಎಂದು ಕಿಡಿಕಾರಿದರು.
ರೈತರ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಿದ್ದೇವೆ. ಕೂಡಲೇ ಸರ್ಕಾರ ಈ ಸ್ವಾಧೀನ ಕ್ರಮವನ್ನು ಕೈ ಬಿಡಬೇಕು. ಸರ್ಕಾರದಿಂದ ಯಾರಾದರೂ ಬಂದು ರೈತರ ಅಹವಾಲು ಆಲಿಸಬೇಕಿತ್ತು. ರೈತರನ್ನು ಸಮಾಧಾನ ಮಾಡಿ ಮಾತನಾಡಬೇಕಿತ್ತು. ಅದನ್ನು ಬಿಟ್ಟು ದೌರ್ಜನ್ಯ ಮಾಡಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ರೈತರ ಬದುಕಿಗೆ ಕೊಳ್ಳಿ ಇಡುವ ಕೆಲಸ ಬೇಡ ಎಂದರು.



