ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿ ಇದ್ದರೂ, ಅವರ ಅಭಿಮಾನಿಗಳ ಅತಿರೇಕ ಇನ್ನೂ ಕಡಿಮೆಯಾಗಿಲ್ಲ. ಈ ಅತಿರೇಕ ಈಗ ದರ್ಶನ್ ಆಪ್ತರಿಗೆ ತಲೆನೋವನ್ನೇ ತಂದಿದೆ.
ರಚಿತಾ ರಾಮ್ ಅವರು ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ನವರಂಗ್ ಥಿಯೇಟರ್‌ನಲ್ಲಿ ನಡೆದಿತ್ತು.
ವೇದಿಕೆ ಮೇಲೆ ರಚಿತಾ ರಾಮ್ ಮಾತನಾಡುತ್ತಿದ್ದಾಗ ಪ್ರೇಕ್ಷಕರ ಮಧ್ಯೆ ಇದ್ದ ದರ್ಶನ್ ಅಭಿಮಾನಿಗಳು “ಜೈ ಡಿ ಬಾಸ್” ಎಂದು ಘೋಷಣೆ ಕೂಗಿದರು. ಈ ವೇಳೆ ನಟಿ ಕ್ಷಣಕಾಲ ತಾಳ್ಮೆ ಕಳೆದುಕೊಂಡು, “ನಾನು ನನ್ನ ಚಿತ್ರದ ಬಗ್ಗೆ ಮಾತನಾಡುತ್ತಿದ್ದೇನೆ, ದಯವಿಟ್ಟು ಮಾತನಾಡಲು ಬಿಡಿ” ಎಂದು ಹೇಳಿದ್ದಾರೆ. ಆದರೂ ಘೋಷಣೆ ಮುಂದುವರಿದ ಕಾರಣ ಅವರು ಅರ್ಧದಲ್ಲೇ ಮಾತು ನಿಲ್ಲಿಸಿ ಬೇಸರದಿಂದ ಹಿಂಬದಿಗೆ ಸರಿದಿದ್ದಾರೆ.
ರಚಿತಾ ರಾಮ್, ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋದಾಗ ಅವರಿಗೆ ಸಾಂತ್ವನ ನೀಡಲು ಭೇಟಿ ನೀಡಿದ ಕೆಲ ನಟಿಯರಲ್ಲಿ ಒಬ್ಬರು. ಆ ಬಳಿಕ ಅವರು ಪ್ರಕರಣದ ಬಗ್ಗೆ ಮಾತನಾಡದೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ದರ್ಶನ್ ಅಭಿಮಾನಿಗಳ ವರ್ತನೆಯೇ ಅವರಿಗೆ ಅಸಹ್ಯ ತಂದಂತಾಗಿದೆ.
ಉದ್ಯಮ ವಲಯದಲ್ಲಿ ಈ ಘಟನೆ ಕುರಿತು “ಅಭಿಮಾನಿಗಳ ಅತಿರೇಕದಿಂದ ದರ್ಶನ್ ಆಪ್ತರಿಗೂ ಇರಿಸು ಮುರಿಸು ಉಂಟಾಗಿದೆ” ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.


