ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಪ್ರೇಮ ಸಂಬಂಧ ಭೀಕರ ಅಂತ್ಯ ಕಂಡಿದೆ. ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪದಿದ್ದ ಕಾರಣ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ, ಕೊಲೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಲ್ಲಾಪುರ ನಿವಾಸಿ ರಫೀಕ್ ಎಂಬ ಯುವಕ, ತನ್ನ ಪ್ರೇಯಸಿ ರಂಜಿತಾ ಮಲ್ಲಪ್ಪ ಬನ್ಸೋಡೆಯನ್ನು ಶನಿವಾರ ನಡು ರಸ್ತೆಯಲ್ಲೇ ಕತ್ತು ಕೊಯ್ದು ಹತ್ಯೆ ಮಾಡಿದ್ದ. ಬಳಿಕ ಪರಾರಿಯಾಗಿದ್ದ ಆತ, ನಿಸರ್ಗ ಮನೆಯ ಹಿಂಭಾಗದ ಕಾಜಲ್ವಾಡ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಂಜಿತಾ 10 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದು, ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು. ಐದು ವರ್ಷದ ಮಗುವಿನ ಜವಾಬ್ದಾರಿಯೊಂದಿಗೆ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ರಫೀಕ್ ಮತ್ತು ರಂಜಿತಾಳ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಕಾರಣದಿಂದ ರಫೀಕ್ ಆಗಾಗ ಆಕೆಯ ಮನೆಗೆ ಬಂದು ಹೋಗುತ್ತಿದ್ದನೆಂದು ತಿಳಿದು ಬಂದಿದೆ. ಆದರೆ ಇತ್ತೀಚೆಗೆ ಮದುವೆಗೆ ಒತ್ತಾಯ ಆರಂಭಿಸಿದ ರಫೀಕ್ಗೆ ರಂಜಿತಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು.
ಶಾಲೆಯಿಂದ ಮನೆಗೆ ಹಿಂತಿರುಗುವ ವೇಳೆ ರಂಜಿತಾಳನ್ನು ಅಡ್ಡಗಟ್ಟಿ ಮದುವೆ ವಿಚಾರವಾಗಿ ಜಗಳ ಆರಂಭಿಸಿದ ರಫೀಕ್, ಆಕೆಯ ನಿರಾಕರಣೆಯಿಂದ ಕೋಪಗೊಂಡು ಸಾರ್ವಜನಿಕ ರಸ್ತೆಯಲ್ಲೇ ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಈ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಮೂಡಿಸಿದೆ.



