ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ.
2026 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮುಂಚಿತವಾಗಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ದ್ರಾವಿಡ್ ಬೇರ್ಪಟ್ಟಿರುವುದಾಗಿ ಫ್ರಾಂಚೈಸಿ ಶನಿವಾರ ದೃಢಪಡಿಸಿದೆ. ರಾಯಲ್ಸ್ ತಂಡವು ದ್ರಾವಿಡ್ ಅವರ ಸೇವೆಗಳಿಗೆ ಧನ್ಯವಾದ ಅರ್ಪಿಸಿದೆ.
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಸ್ವತಃ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ರಾಹುಲ್ ದ್ರಾವಿಡ್ ಕಳೆದ ವರ್ಷವಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ್ದರು. 2024 ರ ಟಿ20 ವಿಶ್ವಕಪ್ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು. ಇದಕ್ಕೂ ಮೊದಲು ಅವರು 2011 ರಿಂದ 2013 ರವರೆಗೆ ಆಟಗಾರನಾಗಿ ಈ ತಂಡದ ಭಾಗವಾಗಿದ್ದರು. ಆ ನಂತರ 2015 ರವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದ ದ್ರಾವಿಡ್ ಇದೀಗ ಇದ್ದಕ್ಕಿದ್ದಂತೆ ತಂಡವನ್ನು ತೊರೆದಿದ್ದಾರೆ.