ವಿಜಯಸಾಕ್ಷಿ ಸುದ್ದಿ, ಗದಗ: ಮತ ಕಳ್ಳತನದ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಿಲುವು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಜನರ ವಿಶ್ವಾಸವನ್ನು ಗಳಿಸುವಲ್ಲಿ ರಾಹುಲ್ ಗಾಂಧಿಯವರು ವಿಫಲರಾಗಿದ್ದಾರೆ. ಸೋಲಿನ ಅವಮಾನದಿಂದ ಬಳಲಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದರು. ಈಗ ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಸುಳ್ಳು ಅಪವಾದ ಹೊರಿಸುವ ಮೂಲಕ ದೇಶದ ಜನತೆಗೆ ಹಾಗೂ ಚುನಾವಣಾ ಆಯೋಗಕ್ಕೆ ಅವಮಾನ ಮಾಡುತ್ತಿದ್ದಾರೆ.
ಈ ಸುಳ್ಳು ಆರೋಪದ ಹಿಂದೆ ಕಾಂಗ್ರೆಸ್ ಸಂಚು ಅಡಗಿದೆ. ಮತ ಕಳ್ಳತನ ಆಗಿರುವ ಬಗ್ಗೆ ತಮ್ಮ ಬಳಿ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಆದಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ. ಆದರೆ ಅವರ ಬಳಿ ಪುರಾವೆ ಇದ್ದಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಬೇಕೇ ಹೊರತು ಜನರಲ್ಲಿ ಗೊಂದಲ ಉಂಟುಮಾಡಬಾರದು.
ಕಾಂಗ್ರೆಸ್ ನಾಯಕರು ಈ ಸುಳ್ಳಿನ ಅಪಪ್ರಚಾರ ಮಾಡುತ್ತಿರುವುದು ದೇಶದ ಮತದಾರರ ಮುಂದೆ ಕಾಂಗ್ರೆಸ್ ಪಕ್ಷದ ನಾಯಕರು ನಗೆಪಾಟಲಿಗೀಡಾಗಿದ್ದಾರೆಂದು ಹೇಳಿದ್ದಾರೆ.